ಮಡಿಕೇರಿ, ಡಿ. 12: ತಾಲೂಕು ಬಾಲ ಭವನ ಸಮಿತಿ, ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗಾಳಿಬೀಡು ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗಾಳಿಬೀಡು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ವಾರಂತ್ಯ ಶಿಬಿರವು ನಡೆಯಿತು.

ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಿಂದ ಸುಮಾರು 70 ಮಕ್ಕಳು ಈ ಶಿಬಿರದ ಉಪಯೋಗ ಪಡೆಯುತ್ತಿದ್ದು, ಶಿಬಿರದಲ್ಲಿ ಯೋಗ ಮತ್ತು ನೃತ್ಯಭ್ಯಾಸಗಳನ್ನು ಹೇಳಿಕೊಡಲಾಗುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಅವರು ತಿಳಿಸಿದರು.

ಗಾಳಿಬೀಡು ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಿರಣ ಅವರು ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳಿಗೆ ಶುಭ ಹಾರೈಸಿದರು. ಗಾಳಿಬೀಡು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ದೇವಮ್ಮ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ರಸಿನ, ಸಹ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದಂತಹ ಮಹೇಶ್, ಪುನೀತ್, ರಮೇಶ್ ಇತರರು ಇದ್ದರು.