ಸಿದ್ದಾಪುರ, ಡಿ. 12: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಖಚಿತ ಎಂದು ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನಿಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಶಾಸಕರಿಂದ ಏನು ಅಭಿವೃದ್ಧಿ ಆಗಿಲ್ಲ. ಈ ಬಗ್ಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೌನವಹಿಸಿದೆ.

2018ರಿಂದ ಸತತ ಮೂರು ವರ್ಷ ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಕಷ್ಟ ಎದುರಿಸುತ್ತಿದ್ದರೂ ಪರಿಹಾರಕ್ಕೆ ಒತ್ತು ನೀಡದೆ ಸಂತ್ರಸ್ತರು ಇಂದಿಗೂ ಮನೆ ಇಲ್ಲದೆ ನದಿದಡದಲ್ಲಿ ಪ್ಲಾಸ್ಟಿಕ್ ಶೆಡ್‍ಗಳಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಸೂಕ್ತ ನಿವೇಶನ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಬದಲಾವಣೆ ಅಗತ್ಯ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದ ಅವರು ಈಗಾಗಲೇ ನಮ್ಮ ಪಕ್ಷದ ಸಾಮೂಹಿಕ ಸಂಘಟನೆ ಬಲಿಷ್ಟವಾಗಿದ್ದು ತೋಟ ಕಾರ್ಮಿಕ ಸಂಘಟನೆ, ದಲಿತ ರೈಟ್ಸ್ ಮೂಮೆಂಟ್ ಸೇರಿದಂತೆ ಉಳಿದ ಎಡಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ಸದಸ್ಯ ಧರ್ಮರಾಜ್, ಜಿಲ್ಲಾ ಸಹ ಕಾರ್ಯದರ್ಶಿಗಳಾದ ರಫೀಕ್ ನವಲಗುಂದ, ಹೆಚ್.ಎಂ. ಸೋಮಪ್ಪ, ರಮೇಶ್ ಮಾಯಮುಡಿ, ತೋಟ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಎನ್. ಮಣಿ ಹಾಜರಿದ್ದರು.