ಗೋಣಿಕೊಪ್ಪಲು, ಡಿ.12: ಕೊಡಗಿನ ಜನರು ದೇಶ ಹಾಗೂ ವಿದೇಶಗಳಲ್ಲಿ ಯಾವುದೇ ನೌಕರಿಯಲ್ಲಿದ್ದರೂ, ಕೊಡಗಿನಲ್ಲಿಯೇ ಮತದಾನದ ಚೀಟಿಯನ್ನು ಹೊಂದಬೇಕು ಹಾಗೂ ರಾಜ್ಯ ಹಾಗೂ ಕೇಂದ್ರಕ್ಕೆ ನಡೆಯುವ ಚುನಾವಣೆಯ ಮತದಾನದ ಸಂದರ್ಭ ಯಾವುದೇ ಒತ್ತಡವಿದ್ದರೂ ಅದನ್ನು ಬದಿಗೊತ್ತಿ ಕೊಡಗಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಆ ಮೂಲಕ ಕೊಡಗಿನ ಅಭಿವೃದ್ದಿಗೆ ದುಡಿಯುವ ಜನಪ್ರತಿನಿಧಿಗಳನ್ನು ನಾವುಗಳೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಜನಾಂಗದ ಬಾಂಧವರಿಗೆ ಕರೆ ನೀಡಿದರು.

ದ.ಕೊಡಗಿನ ಟಿ.ಶೆಟ್ಟಿಗೇರಿ ಸಮೀಪದ ತಾಳೇರಿ ಮೂಂದ್‍ನಾಡ್ ಕೋಲ್‍ಮಂದ್ ನಮ್ಮೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೊಡಗಿನ ಜನರು ವಿವಿಧ ಹುದ್ದೆಗಳಲ್ಲಿ ರಾಜ್ಯ ಹಾಗೂ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಆದರೆ ಮೂಲ ಸ್ಥಾನವನ್ನು ಯಾರೂ ಕೂಡ ಮರೆಯಬಾರದು. ವಿಶೇಷವಾಗಿ ಚುನಾವಣೆ ಸಂದರ್ಭ ತಮ್ಮ ಮತದಾನದ ಹಕ್ಕನ್ನು ಇಲ್ಲಿಯೇ ಚಲಾಯಿಸಬೇಕು. ಇದರಿಂದ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮಗೆ ಬೇಕಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಾಗಲಿದೆ ಎಂದರು.

ಮೂರು ನಾಡುಗಳಾದ ತಾಳೇರಿನಾಡ್, ಮರೆನಾಡ್, ತೊಡನಾಡ್‍ಗೆ ಸೇರಿರುವ 16 ಗ್ರಾಮಗಳಿಂದ ಗ್ರಾಮಸ್ಥರು ಆಗಮಿಸಿ ತಾಳೇರಿ ಮೂಂದ್‍ನಾಡ್ ಕೋಲ್ ಮಂದ್‍ನಲ್ಲಿ ಪುತ್ತರಿ ಕಳೆದ ಮೂರು ದಿನದಲ್ಲಿ ಕೋಲ್‍ಮಂದ್ ನಮ್ಮೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಕೊಡವ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ನಮ್ಮೆಯ ಅಧ್ಯಕ್ಷತೆ ವಹಿಸಿದ್ದ ತಾಳೇರಿ ಮೂಂದ್ ನಾಡ್ ನಾಡ ತಕ್ಕ, ತಾವಳಗೇರಿ ಮೂಂದ್‍ನಾಡ್ ಕೋಲ್‍ಮಂದ್ ಸಮಿತಿಯ ಅಧ್ಯಕ್ಷರಾದ ಕೈಬಿಲೀರ ಹರೀಶ ಅಪ್ಪಯ್ಯ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ರೂಡ್ಸ್ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿ ಬಂದವು. ಉಮ್ಮತ್ತಾಟ್, ಕೋಲಾಟ್ ಹಾಗೂ ಕಪ್ಪೆಯಾಟ್ ನಡೆದವು. ನಾಡಿನ ಹಿರಿಯ ಹಾಗೂ ಕಿರಿಯರು ಕೋಲ್‍ಮಂದ್‍ಗೆ ಆಗಮಿಸಿ ಆರಂಭದಲ್ಲಿ ಕೋಲಾಟ ಆಡುವ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ತಾವಳಗೇರಿ ಮಹಾದೇವರ ತಕ್ಕರಾದ ತಡಿಯಂಗಡ ರಮೇಶ್, ತಾವಳಗೇರಿ ಸುಬ್ರಮಣ್ಯ ದೇವತಕ್ಕರಾದ ಕುಪ್ಪುಡಿರ ತಿಲಕ್‍ದಾಸ್, ತಾವಳಗೇರಿ ಭದ್ರಕಾಳಿ ದೇವತಕ್ಕರಾದ ಮನ್ನೇರ ರಾಜು ಮೊಣ್ಣಪ್ಪ, ತಾವಳಗೇರಿ ಮುತ್ತಪ್ಪ ದೇವತಕ್ಕರಾದ ಮಾಂಗುಟ್ಟಿರ ಕಾಶಿ ಉತ್ತಪ್ಪ, ಟಿ.ಶೆಟ್ಟಿಗೇರಿ ಕೊರಕೋಟು ಅಯ್ಯಪ್ಪ ತಕ್ಕರಾದ ಚೊಟ್ಟೆಕೊರಿಯಂಡ ಶ್ರೀನಿವಾಸ್,ಟಿ.ಶೆಟ್ಟಿಗೇರಿ ವಗರೆ ಅಯ್ಯಪ್ಪ ದೇವತಕ್ಕರಾದ ಕಟ್ಟೆರ ಅಚ್ಚಪ್ಪ, ನೆಮ್ಮಲೆ ಊರು ತಕ್ಕರಾದ ಚಟ್ಟಂಗಡ ಹ್ಯಾರಿ ನಾಣಯ್ಯ ಸೇರಿದಂತೆ ಪ್ರಮುಖ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುರುಷರ ವಿಭಾಗದಲ್ಲಿ ನೆಮ್ಮಲೆ ಪ್ರಥಮ, ತಾವಳಗೇರಿ ದ್ವಿತೀಯ ಹಾಗೂ ಟಿ.ಶೆಟ್ಟಿಗೇರಿ ವಗರೆ ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ನೆಮ್ಮಲೆ ಪ್ರಥಮ, ತಾವಳೆಗೇರಿ ದ್ವೀತಿಯ ಹಾಗೂ ಟಿ.ಶೆಟ್ಟಿಗೇರಿ ಕೊರಕೊಟ್ಟು ತೃತೀಯ ಸ್ಥಾನ ಪಡೆಯಿತು.

ಹೆಣ್ಣು ಕುದುರೆಯು ಕೈಬಿಲೀರ ಐನ್‍ಮನೆ ಕುಟುಂಬದಿಂದ ಹೊರಟು ಕೈಬಿಲೀರ ಅಂಬಲ ಪ್ರದಕ್ಷಿಣೆ ಮಾಡಿದ ನಂತರ ಭದ್ರಕಾಳಿ ದೇವರ ದರ್ಶನ ಪಡೆದು ತಾಳೇರಿ ಮೂಂದ್‍ನಾಡ್ ಮಂದ್‍ಗೆ ಆಗಮಿಸಿ ಪ್ರದರ್ಶನ ನೀಡಿದವು. ತಾಳೇರಿ ಮೂಂದ್ ನಾಡ್ ಮಂದ್‍ಗೆ ನಿಗಧಿತ ಸಮಯದಲ್ಲಿ ಆಗಮಿಸಿದವು. ಗಂಡು ಕುದುರೆಯು ಕೊರಕೊಟ್ಟು ದೇವಾಲಯದಿಂದ ಹೊರಟು ಮಾಯಣಮಾಡ ಕುಟುಂಬದ ಅಂಬಲ ದಾಟಿ, ಅಪ್ಪಚಂಗಡ ಕುಟುಂಬದ ಅಂಬಲ ಮುಗಿಸಿ ನಂತರ ಮಚ್ಚಮಾಡ ಕುಟುಂಬಸ್ಥರ ಅಂಬಲಕ್ಕೆ ತೆರಳಿ ಪ್ರದಕ್ಷಿಣೆ ಮಾಡಿದ ನಂತರ ತಾಳೇರಿ ಮೂಂದ್ ನಾಡ್ ಮಂದ್‍ಗೆ ಆಗಮಿಸಿ ಜೊತೆಗೂಡಿ ನೃತ್ಯ ಪ್ರದರ್ಶನ ಮಾಡಿದವು. ನಂತರ ಸಂಜೆಯ ವೇಳೆಯಲ್ಲಿ ಸಂಪ್ರದಾಯಿಕವಾಗಿ ಕುದುರೆಗಳನ್ನು ಬೀಳ್ಕೊಡಲಾಯಿತು. ಚಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿದರು. ಚೊಟ್ಟೆಯಂಡ ಮಾಡ ಬೋಸು ಸ್ವಾಗತಿಸಿ, ಕಟ್ಟೆರ ಈಶ್ವರ್ ವಂದಿಸಿದರು.

-ಹೆಚ್.ಕೆ.ಜಗದೀಶ್