ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕು ಪತ್ತೆ

ಬೆಂಗಳೂರು, ಡಿ. 12: ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ಸೋಂಕು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನ ಆರೋಗ್ಯಸೌಧದಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಪುಣೆ ವೈರಾಲಜಿ ಲ್ಯಾಬ್‍ನಿಂದ ಪಾಸಿಟಿವ್ ರಿಪೆÇೀರ್ಟ್ ಬಂದಿದೆ. ಝೀಕಾ ವೈರಸ್ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಇನ್ನು ಝೀಕಾ ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ ಎಂದರು. ಬಾಲಕಿ ಕಳೆದ 15 ದಿನಗಳಿಂದ ಜ್ವರ, ವಾಂತಿ, ಬೇಧಿಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ನವೆಂಬರ್ 13 ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಡೆಂಘೀ ಜ್ವರ ದೃಢಪಟ್ಟ ಹಿನ್ನೆಲೆ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ವೈದ್ಯರು ಬಾಲಕಿಯ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್‍ಗೆ ಕಳುಹಿಸಿದ್ದು ತಾ. 9 ರಂದು ಪಾಸಿಟಿವ್ ಬಂದಿತ್ತು ಎಂದರು. ಸೋಂಕು ಕಾಣಿಸಿಕೊಂಡಿರುವುದರಿಂದ ರಾಯಚೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಝೀಕಾ ವೈರಸ್ ಸೋಂಕು ಕುರಿತಂತೆ ಯಾರೂ ಆತಂಕಪಡುವ ಅಗಕತ್ಯವಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಸಂಜೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾಡಾನೆ ದಾಳಿ ಪರಿಹಾರ ದ್ವಿಗುಣಗೊಳಿಸಲು ಸರ್ಕಾರ ನಿರ್ಧಾರ

ಬೆಂಗಳೂರು, ಡಿ. 12: ಕಾಡಾನೆ ದಾಳಿಯಿಂದ ಸಾವಿಗೀಡಾದವರ ಕುಟುಂಬಕ್ಕೆ ನೀಡುವ ಪರಿಹಾರವನ್ನು ದ್ವಿಗುಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಡಾನೆ ದಾಳಿಯಿಂದ ಸಾವಿಗೀಡಾದವರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು ರೂ. 7.5 ಲಕ್ಷದಿಂದ ರೂ. 15 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಅಬಕಾರಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಆನೆ ದಾಳಿಯಿಂದ ಶಾಶ್ವತ ಅಂಗವಿಕಲತೆಗೆ ಒಳಗಾಗುವವರಿಗೆ ಈಗಿರುವ ರೂ. 5 ಲಕ್ಷದಿಂದ ರೂ. 10 ಲಕ್ಷ, ಭಾಗಶಃ ಅಂಗವೈಕಲ್ಯಕ್ಕೆ ರೂ. 2.5 ಲಕ್ಷದಿಂದ ರೂ. 5 ಲಕ್ಷ, ದಾಳಿಯಿಂದ ಗಾಯಗೊಂಡವರಿಗೆ ರೂ. 30 ಸಾವಿರದಿಂದ ರೂ. 60 ಸಾವಿರದವರೆಗೆ ಪರಿಹಾರ ನೀಡಲು ಸಭೆ ನಿರ್ಧರಿಸಿತು. ಆಸ್ತಿ ಹಾನಿಗೆ ಸಂಬಂಧಿಸಿದಂತೆ ಪರಿಹಾರವನ್ನು ರೂ. 10,000 ದಿಂದ ರೂ. 20,000 ಕ್ಕೆ ಹೆಚ್ಚಿಸಲು ನಿರ್ಧರಿಸಲಾಯಿತು. ಇದೇ ವೇಳೆ ಶಾಶ್ವತ ಅಂಗವಿಕಲತೆಗೆ ಒಳಗಾದವರಿಗೆ ಮಾಸಿಕ ಪಿಂಚಣಿಯನ್ನು ರೂ. 2,000 ದಿಂದ ರೂ. 4,000 ಗಳಿಗೆ ಹೆಚ್ಚಿಸಲಾಗಿದೆ. ಬೆಳೆ ಹಾನಿಗೆ ಪಾವತಿಸಿದ ಮೊತ್ತವೂ ದ್ವಿಗುಣಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ. ಸಕಲೇಶಪುರ-ಬೇಲೂರು ಪ್ರದೇಶದಲ್ಲಿ ಅನಾಹುತ ಸೃಷ್ಟಿಸುತ್ತಿದ್ದ ಎಂಟು ಆನೆಗಳನ್ನು ಸೆರೆಹಿಡಿಯಲು ಮತ್ತು ಸೆರೆಹಿಡಿದ ಆನೆಗಳ ಮೇಲೆ ನಿಗಾ ವಹಿಸಲು ರೇಡಿಯೋ ಕಾಲರ್ ಮಾಡಲು ಅನುಮತಿ ನೀಡಲಾಗಿದೆ. ಈಗಾಗಲೇ 23 ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡಲು ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಅದು ಹೇಳಿದೆ.

ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪ್ರಮಾಣ ವಚನ

ನವದೆಹಲಿ, ಡಿ. 12: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಪಾಲ್ಗೊಂಡಿದ್ದ ಪ್ರಮಾಣವಚನ ಸಮಾರಂಭದಲ್ಲಿ ಭೂಪೇಂದ್ರ ಪಟೇಲ್ ಸೋಮವಾರ ಎರಡನೇ ಬಾರಿಗೆ ಗುಜರಾತ್‍ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಪೇಂದ್ರ ಪಟೇಲ್ ಸಂಪುಟದ ಒಟ್ಟು 16 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಗುಜರಾತಿನ ನೂತನ ಸಚಿವ ಸಂಪುಟದ 17 ಸದಸ್ಯರ ಪೈಕಿ ಒಬ್ಬರು ಮಹಿಳೆ ಇದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನದೇ ಆದ ದಾಖಲೆಯನ್ನು ಮುರಿದು 156 ಸ್ಥಾನಗಳನ್ನು ಗಳಿಸಿದೆ. ಭೂಪೇಂದ್ರ ಪಟೇಲ್ ಅವರು ಗುಜರಾತ್‍ನ 18ನೇ ಮುಖ್ಯಮಂತ್ರಿಯಾಗಿದ್ದಾರೆ. ಗಾಂಧಿ ನಗರದ ಹೊಸ ಸೆಕ್ರೆಟರಿಯೇಟ್ ಬಳಿ ನಡೆದ ಸಮಾರಂಭದಲ್ಲಿ ಕನು ದೇಸಾಯಿ, ರುಷಿಕೇಶ್ ಪಟೇಲ್, ರಾಘವ್‍ಜಿ ಪಟೇಲ್, ಬಲ್ವಂತ್ ಸಿಂಗ್ ರಜಪೂತ್, ಕುನ್ವರ್ಜಿ ಬವಾಲಿಯಾ, ಮುಲುಭಾಯಿ ಬೇರಾ, ಕುಬೇರಭಾಯಿ ಮನ್ಸುಖಭಾಯಿ ದಿಂಡೋರ್, ಭಾನುಬೆನ್ ಬಬಾರಿಯಾ, ಹರ್ಷ ಸಾಂಘ್ವಿ, ಜಗದೀಶ್ ವಿಶ್ವಕರ್ಮ, ಪರಸತ್ತಮ್ ಸೋಲಂಕಿ, ಬಾಚುಭಾಯಿ ಖಬದ್, ಮುಕೇಶಭಾಯ್ ಜಿನ್ಭಾಯಿ ಪಟೇಲ್, ಭಿಖುಭಾಯಿ ಪರ್ಮಾರ್, ಪ್ರಫುಲ್ ಪನ್ಸೇರಿಯಾ ಕಾಮ್‍ರೇಜ್ ಪ್ರಮಾಣ ವಚನ ಸ್ವೀಕರಿಸಿದರು.