ಮರಗೋಡು, ಡಿ. 12: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಹುತ್ತರಿ ಕಪ್ ಫುಟ್ಬಾಲ್ ಹಣಾಹಣಿಯಲ್ಲಿ ಆತಿಥೇಯ ವೈಷ್ಣವಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ನಿಗದಿತ ಅವಧಿಯ ಆಟದಲ್ಲಿ ಎರಡೂ ತಂಡಗಳು ತಲಾ ಒಂದು ಒಂದು ಗೋಲುಗಳಿಂದ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ವೈಷ್ಣವಿ ತಂಡ 4-3 ಗೋಲುಗಳ ಅಂತರದಿಂದ ಜಯಭೇರಿ ಭಾರಿಸಿ ಟ್ರೋಫಿಗೆ ಮುತ್ತಿಕ್ಕಿತು. ವೈಷ್ಣವಿ ತಂಡ ಆಕರ್ಷಕ ಟ್ರೋಫಿ ಹಾಗೂ 30 ಸಾವಿರ ರೂ ನಗದು ಗೆದ್ದುಕೊಂಡರೆ ಸುಂಟಿಕೊಪ್ಪ ತಂಡ ಟ್ರೋಫಿ ಹಾಗೂ 20 ಸಾವಿರ ರೂ ನಗದು ಗೆದ್ದುಕೊಂಡಿತು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಮಿಡ್ ಸಿಟಿ ತಂಡ ಹಾಗೂ ಮೈಸೂರಿನ ವಿಜಯ ನಗರ ಎಫ್.ಸಿ ತಂಡದ ಮಧ್ಯೆ ರೋಚಕ ಹೋರಾಟ ನಡೆಯಿತು. ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ಮಿಡ್ ಸಿಟಿ ತಂಡ 9-8 ಗೋಲುಗಳಿಂದ ಜಯಭೇರಿ ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ಇದೇ ಸಂದರ್ಭ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯಾಟದಲ್ಲಿ ಆತಿಥೇಯ ವೈಷ್ಣವಿ ತಂಡ ಗೋಣಿಕೊಪ್ಪಲಿನ ಆಲ್ ಸ್ಟಾರ್ ತಂಡವನ್ನ ಪೆನಾಲ್ಟಿ ಶೂಟೌಟ್ ನಲ್ಲಿ 4-3 ಗೋಲುಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಅಂತಿಮ ದಿನದಾಟದಲ್ಲಿ ವೈಷ್ಣವಿ ಮಹಿಳಾ ಪುಟ್ಬಾಲ್ ತಂಡ ಹಾಗೂ ಗೋಣಿಕೊಪ್ಪ ಲಯನ್ಸ್ ಶಾಲೆಯ ಮಹಿಳಾ ತಂಡದ ಮಧ್ಯೆ ಪ್ರದರ್ಶನ ಪಂದ್ಯ ನಡೆಯಿತು. ನಿಗದಿತ ಅವಧಿಯಲ್ಲಿ ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟೌಟ್ ನಲ್ಲಿ ಗೋಣಿಕೊಪ್ಪ ತಂಡ 4-2 ಗೋಲುಗಳಿಂದ ಜಯ ದಾಖಲಿಸಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜಸೇವಕ ಡಾ. ಮಂಥರ್‍ಗೌಡ, ರಾಜಕೀಯ ಸಮಾಜವನ್ನ ಒಡೆಯುತ್ತದೆ, ಆದರೆ ಕ್ರೀಡೆ ಸಮಾಜವನ್ನು ಒಗ್ಗೂಡಿಸುತ್ತದೆ, ಹಾಗಾಗಿ ಕ್ರೀಡೆಗೆ ತಮ್ಮ ಪೆÇ್ರೀತ್ಸಾಹ ನಿರಂತರವಾಗಿರುತ್ತದೆ ಎಂದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಚೆರಿಯಮನೆ ಭಾರ್ಗವ, ಕ್ರೀಡಾಕೂಟಗಳನ್ನು ವೀಕ್ಷಿಸುವುದು ಬಹಳ ಖುಷಿ ಕೊಡುತ್ತದೆ ಆದರೆ ಅದೇ ಕ್ರೀಡಾಕೂಟ ಸಂಘಟಿಸುವುದು ಬಹಳ ಕಷ್ಟದ ಕೆಲಸ. ಅಂತಹದರಲ್ಲಿ ವೈಷ್ಣವಿ ಫುಟ್ಬಾಲ್ ಕ್ಲಬ್ ಕಳೆದ ಹಲವು ವರ್ಷಗಳಿಂದ ನಿರಂತರ ಕ್ರೀಡಾಕೂಟ ಆಯೋಜಿಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕೊಂಡಾಡಿದರು.

ಮೈಸೂರಿನ ಹೋಟೆಲ್ ಉದ್ಯಮಿ ಅರ್ಪಿತ್, ಭಾರವಿ ಕನ್ನಡ ಸಂಘದ ರವೀಂದ್ರ ಪ್ರಸಾದ್, ಉದ್ಯಮಿಗಳಾದ ನವೀನ್, ಕಿಶೋರ್ ಸುಬ್ಬಯ್ಯ, ರತ್ನಾಕರ್ ಚೆರಿಯಮನೆ, ಕೊಡಗು ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಉಪಸ್ಥಿತರಿದ್ದರು.