ಸೋಮವಾರಪೇಟೆ, ಡಿ. 12: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಳ್ಳಿ-ಕುಮಾರಳ್ಳಿ, ಕುಡಿಗಾಣ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ನಡುವೆ ಉದ್ಭವಿಸಿರುವ ಅರಣ್ಯ ಗಡಿ ಗುರುತು ವಿವಾದವನ್ನು ಮುಂದಿನ 15 ದಿನಗಳ ಒಳಗೆ ಬಗೆಹರಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಲ್ಲಿನ ಶಾಸಕರ ಕಚೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಯಿತು.

ಸಭೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಆರೋಪಿಸಿದರು. ಈ ಹಿಂದೆ ಪುಷ್ಪಗಿರಿ ವನ್ಯಜೀವಿಧಾಮ ಅರಣ್ಯ ವಲಯ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಕೊತ್ನಳ್ಳಿ-ಕುಮಾರಳ್ಳಿ ಗ್ರಾಮಸ್ಥರ ಸಮ್ಮುಖದೊಂದಿಗೆ ಸೇರಿ ಜಂಟಿ ಸರ್ವೆ ನಡೆಸಿ ಗೆಜೆಟ್ ನೋಟಿಫಿಕೇಷನ್ ಆಗಿರುವ ಪುಷ್ಪಗಿರಿ ವೈಲ್ಡ್ ಲೈಫ್‍ನ ಬೌಂಡರಿ ಗುರುತು ಮಾಡಿ ಜಿಪಿಎಸ್ ವರ್ಕಿಂಗ್ ಪ್ಲಾನ್ ಅನ್ವಯ ಗಡಿ ಗುರುತಿಸಲಾಗಿತ್ತು.

ಆದರೆ ಪುಷ್ಪಗಿರಿ ವನ್ಯಜೀವಿಧಾಮ ವಲಯದ ಅಧಿಕಾರಿಗಳು, ಈ ಹಿಂದೆ ಮಾಡಿದ್ದ ಗಡಿ ಗುರುತು ಬದಲಿಗೆ ತಮ್ಮ ಮನಸೋಯಿಚ್ಚೆ ಗಡಿ ಗುರುತಿಸಿ ಗಡಿಕಲ್ಲುಗಳನ್ನು ನೆಟ್ಟಿದ್ದಾರೆ. ನೈಜ ಗಡಿಯ ಬದಲಿಗೆ ಒಳಗಿನ ಭೂ ಪ್ರದೇಶಕ್ಕೆ ಗಡಿಯನ್ನು ಗುರುತಿಸಿ ಕಲ್ಲು ಹಾಕಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಭಾರೀ ಸಮಸ್ಯೆಯಾಗಲಿದೆ ಎಂದು ಆರೋಪಿಸಿದರು.

ಈ ಬಗ್ಗೆ ಕಳೆದ ತಿಂಗಳು ತಮ್ಮದೇ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸೂಚನೆ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರೊಂದಿಗೆ ಬೆಟ್ಟತಪ್ಪಲಿನ ಕೆಳ ಭಾಗದ ಮಂದಿ ಬಳಸುತ್ತಿರುವ ಕುಡಿಯುವ ನೀರಿಗೂ ತಡೆಯೊಡ್ಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಹಿಂದೆ 8756 ಏಕರೆ ಪುಷ್ಪಗಿರಿ ವನ್ಯಜೀವಿಧಾಮದ ಪ್ರದೇಶವಿದ್ದುದು ಇದೀಗ 11,494ಕ್ಕೆ ಏರಿಕೆ ಮಾಡಲಾಗಿದೆ. ಆರ್‍ಟಿಸಿಯಲ್ಲಿ ಹೆಚ್ಚುವರಿ ಭೂ ಪ್ರದೇಶವನ್ನು ಸೇರಿಸಲಾಗಿದೆ. ಇದರಿಂದಾಗಿ ಈ ಭಾಗದ ಸಾರ್ವಜನಿಕರು ಅರ್ಜಿ ನಮೂನೆ 57, 50, 94 ಸಿ ಅಡಿಯಲ್ಲಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದರೂ ಮಂಜೂರಾಗುತ್ತಿಲ್ಲ. ಕೋವಿ ಪರವಾನಗಿ ಲಭಿಸುತ್ತಿಲ್ಲ ಎಂದು ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ದೂರುಗಳ ಸುರಿಮಳೆಗೈದರು.

ಇದರೊಂದಿಗೆ ಗ್ರಾಮಸ್ಥರು ತಮ್ಮ ತೋಟಗಳಿಗೆ ತೆರಳಲು, ದನಕರುಗಳನ್ನು ಮೇಯಿಸಲು ಸಮಸ್ಯೆಯಾಗಿದೆ. ಈ ಹಿಂದೆ ಗ್ರಾಮಸ್ಥರ ಸಮ್ಮುಖದೊಂದಿಗೆ ಗುರುತಿಸಿದ್ದ ಗಡಿಗೆ ಮಾತ್ರ ಕಂಬಗಳನ್ನು ಅಳವಡಿಸಲು ಇಲಾಖೆ ಕ್ರಮವಹಿಸಬೇಕು. ಇದೀಗ ಮುಕ್ಕಾಲು ಕಿ.ಮೀ. ಗ್ರಾಮದ ಕಡೆಗೆ ಹಾಕಿರುವ ಕಂಬಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥರ ಮನವಿ ಆಲಿಸಿದ ಶಾಸಕ ರಂಜನ್, ಇಲಾಖೆಯಿಂದ ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ವನ್ಯಜೀವಿ ವಲಯದ ಎಸಿಎಫ್ ಶ್ರೀನಿವಾಸ್ ನಾಯಕ್, ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್, ಆರ್‍ಎಫ್‍ಓಗಳಾದ ಚೇತನ್, ವಿಮಲ್‍ಬಾಬು ಅವರಿಗೆ ಸೂಚಿಸಿದರು.

ಆರ್‍ಟಿಸಿಯಲ್ಲಿ ತಿದ್ದುಪಡಿ ಮಾಡಲು ಕ್ರಮವಹಿಸಬೇಕು ಎಂದು ತಾಲೂಕು ತಹಶೀಲ್ದಾರ್ ನರಗುಂದ್ ಅವರಿಗೆ ತಿಳಿಸಿದ ಶಾಸಕರು, ಮುಂದಿನ 15 ದಿನಗಳ ಒಳಗೆ ಗಡಿ ವಿವಾದವನ್ನು ಬಗೆಹರಿಸಬೇಕು. ಸ್ಥಳೀಯರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಸಂದರ್ಭ ಎಡಿಎಲ್‍ಆರ್ ವಿರೂಪಾಕ್ಷ, ಕೊತ್ನಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಸಿ.ಕೆ. ರಾಮಚಂದ್ರ, ಕಾರ್ಯದರ್ಶಿ ಕೆ.ಪಿ. ರಾಜೇಶ್, ಕುಮಾರಳ್ಳಿ ಅಧ್ಯಕ್ಷ ಉದಯಕುಮಾರ್, ಕುಡಿಗಾಣ ಗ್ರಾಮಾಧ್ಯಕ್ಷ ದಿನೇಶ್‍ವಾಸು, ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಗ್ರಾ.ಪಂ. ಸದಸ್ಯ ತಮ್ಮಯ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.