ಕಣಿವೆ, ಡಿ. 12: ಸೆಸ್ಟೋಬಾಲ್ ಕ್ರೀಡೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ವಿಜೇತರಾದ ತಂಡವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪದ ಸಾಹಿಲ್ ಉಸ್ಮಾನ್ ಹಾಗೂ ನಂಜರಾಯಪಟ್ಟಣದ ನಂದಿನಿ ಅವರಿಗೆ ನಂಜರಾಯಪಟ್ಟಣದಲ್ಲಿ ಭವ್ಯ ಸ್ವಾಗತ ಕೋರಿ ಅಭಿನಂದಿಸಲಾಯಿತು.

ಸೆಸ್ಟೋಬಾಲ್ ಪುರುಷ ಹಾಗೂ ಮಹಿಳಾ ತಂಡದ ಉಪ ನಾಯಕರಾಗಿ ಸಾಹಿಲ್ ಮತ್ತು ನಂದಿನಿ ಕಾರ್ಯನಿರ್ವಹಿಸಿದ್ದರು. ಥಾಯ್ಲಾಂಡ್‍ನ ಬ್ಯಾಂಕಾಕ್‍ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ತಂಡ ಜಯಗಳಿಸಿತ್ತು. ತವರಿಗೆ ಆಗಮಿಸಿದ ಈ ಇಬ್ಬರು ಕ್ರೀಡಾಪಟು ಗಳನ್ನು ನಂಜರಾಯಪಟ್ಟಣ ಗ್ರಾಮ ಪಂಚಾಯತ್, ಗ್ರಾಮಸ್ಥರು, ಸಂಘಸಂಸ್ಥೆಗಳು, ಕ್ರೀಡಾಪ್ರೇಮಿಗಳು ಭವ್ಯ ಸ್ವಾಗತ ಕೋರಿ ನಂಜರಾಯಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

ರಂಗಸಮುದ್ರದ ಕಲ್ಲುಮಂಟಿ ಬಸವೇಶ್ವರ ದೇವಾಲಯದಿಂದ ನಂಜರಾಯಪಟ್ಟಣ ಗ್ರಾಪಂ ಕಚೇರಿವರೆಗೆ 5 ಕಿ.ಮೀ.ವರೆಗೆ ಈ ಇಬ್ಬರು ಕ್ರೀಡಾಪಟುಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾ.ಪಂ. ಆವರಣದಲ್ಲಿ ಇಬ್ಬರನ್ನು ಸನ್ಮಾನಿಸಿ ಗೌರವಿಸಿ ಆರತಿ ಬೆಳಗಿ ಕೊಂಡಾಡಲಾಯಿತು.

ಈ ಸಂದರ್ಭ ನಂಜರಾಯ ಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ, ಉಪಾಧ್ಯಕ್ಷೆ ಸಮೀರ, ಸದಸ್ಯ ಆರ್.ಕೆ. ಚಂದ್ರ, ಕುಸುಮ, ಮಾಜಿ ಸದಸ್ಯ ಸುಮೇಶ್, ತಾಪಂ ಮಾಜಿ ಸದಸ್ಯ ವಿಜು ಚಂಗಪ್ಪ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು, ಸಂಘ ಸಂಸ್ಥೆಗಳ ಪ್ರಮುಖರು ಗ್ರಾಮಸ್ಥರು ಇದ್ದರು. ಇದಾದ ಬಳಿಕ ಸುಂಟಿಕೊಪ್ಪ ದಲ್ಲಿಯೂ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.