ಮಡಿಕೇರಿ, ಡಿ. 12: ಮಾಸ್ಟರ್ ಮೈಂಡ್ ಚೆಸ್ ಶಾಲೆ ನಡೆಸಿದ ತಾಲೂಕು ಮಟ್ಟದ ಅಂತರ ಶಾಲಾ ಚೆಸ್ ಪಂದ್ಯಾಟದಲ್ಲಿ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ರೋಲಿಂಗ್ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದ ‘ಶಕ್ತಿ’ ದಿನಪತ್ರಿಕೆಯ ಸಲಹಾ ಸಂಪಾದಕ ಅನಂತ ಶಯನ ಅವರು ವಿದ್ಯಾ ಪ್ರಾವೀಣ್ಯತೆ ಮಾತ್ರ ಪರಿಪೂರ್ಣ ಅಲ್ಲ, ವಿದ್ಯೆಯೊಂದಿಗೆ ಅದನ್ನು ಬಳಸಲು ಆತ್ಮಸ್ಥೈರ್ಯ, ಮನದ ಮೇಲಿನ ಹತೋಟಿ ಬೆಳೆಸಿಕೊಂಡರೆ ಯಶಸ್ವೀ ಸಾಧನೆ ಸಾಧ್ಯ ಎಂದರು.
9, 11, 14 ವಯಸ್ಸಿನ ವಯೋಮಿತಿಯಲ್ಲಿ ನಡೆಸಿದ ಸ್ಪರ್ಧೆಯನ್ನು ಕೊಡವ ಸಮಾಜದ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಮತ್ತು ಜೂನಿಯರ್ ಕಾಲೇಜು ಪೋಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಉದ್ಘಾಟಿಸಿದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಅವರು, ಚೆಸ್ ಪಂದ್ಯಾಟ ಮೆದುಳಿಗೆ ಉತ್ತಮ ಕಸರತ್ತು ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.
ಮತ್ತೋರ್ವ ಅತಿಥಿ ಡಾ|| ನಾಗಭೂಷಣ್ ಅವರು ಮಾತನಾಡಿ, ಕಾರ್ಯ ಸಾಧನೆ ಮಾಡಲು ಚದುರಂಗವಾಗಲಿ, ಕಲೆ- ಸಂಗೀತವಾಗಲಿ- ಪೂರ್ಣ ಆಸಕ್ತಿಯಿಂದ ತೊಡಗಿಸಿಕೊಳ್ಳುವುದು ಅವಶ್ಯ ಎಂದು ನುಡಿದರು.
ಉತ್ತಮ ಕಿರಿಯ ಆಟಗಾರನಾಗಿ ಅಂಕುರ್ ಶಾಲೆಯ ಹೆಲನ್ ಚೋಂದಮ್ಮ ಹೊರಹೊಮ್ಮಿದಳು. ಜನರಲ್ ತಿಮ್ಮಯ್ಯ ಶಾಲೆಯ ಲಿಖಿತ್ ಜಿ.ವಿ. 9 ವರ್ಷದ ಕೆಳಗಿನವರಲ್ಲಿ ಚಾಂಪಿಯನ್, ಸಂತ ಜೋಸೆಫರ ಶಾಲೆಯ ದರ್ಶಿಲ್ ಆರ್. ಶೆಟ್ಟಿ 11 ವರ್ಷದ ಕೆಳಗಿನವರ ಸ್ಪರ್ಧೆಯಲ್ಲಿ ಪ್ರಥಮ, 14 ವರ್ಷದ ಕೆಳಗಿನವರಲ್ಲಿ ಕೊಡಗು ವಿದ್ಯಾಲಯದ ಅಮೃತ್ ಬಿ.ಎಸ್. ಪ್ರಥಮ ಸ್ಥಾನ ಗಳಿಸಿದರು.
ಚದುರಂಗ ಪಂದ್ಯಾಟದಲ್ಲಿ ಮಡಿಕೇರಿಯಲ್ಲಿ ರೋಲಿಂಗ್ ಟ್ರೋಫಿ ಇರಿಸಿರುವುದು ಇದೇ ಪ್ರಥಮ ಎಂದು ಶಾಲೆಯ ಕಾವ್ಯ ಹಾಗೂ ರಾಘವೇಂದ್ರ ಹೇಳಿದರು. ಡಾ. ಅನುಶ್ರೀ ನಿರೂಪಣೆ ಮಾಡಿದರು.