ಸಿದ್ದಾಪುರ, ಡಿ. 12: ನೆಲ್ಲಿಹುದಿಕೇರಿ ಗ್ರಾಮದ ನಾಲ್ಕನೇ ವಾರ್ಡಿನ ಶಾಲೆ ರಸ್ತೆಯ ಭಾಗದಲ್ಲಿ ಒಂಟಿ ಸಲಗವೊಂದು ಉಪಟಳ ನೀಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಾಲ್ಕನೇ ವಾರ್ಡ್ನ ನಿವಾಸಿಗಳಾದ ಟಿ.ಟಿ ಉದಯ ಕುಮಾರ್ ಮತ್ತು ಮಣಿ ಎಂಬವರಿಗೆ ಸೇರಿದ ಕಾಫಿ ತೋಟ ಹಾಗೂ ಗದ್ದೆಗಳಲ್ಲಿ ಕಳೆದ ಮೂರು ದಿನಗಳಿಂದ ಒಂಟಿ ಸಲಗವೊಂದು ರಾತ್ರಿ ಸಮಯದಲ್ಲಿ ಬಂದು ಉಪಟಳ ನೀಡುತ್ತಿದೆ.
ಅಲ್ಲದೇ ಮಣಿ ಎಂಬವರ ಕಾಫಿ ತೋಟದಲ್ಲಿದ್ದ ಅಡಿಕೆ ಮರಗಳನ್ನು ಎಳೆದು ಹಾಕಿ ಹಾನಿಗೊಳಿಸಿದೆ. ಉದಯ ಕುಮಾರ್ ಅವರ ಗದ್ದೆಗೆ ಲಗ್ಗೆಯಿಟ್ಟು ಕಟಾವಿಗೆ ಬಂದಿರುವ ಭತ್ತದ ಬೆಳೆಗಳನ್ನು ತಿಂದು ತುಳಿದು ನಾಶಗೊಳಿಸಿದೆ. ಈ ಸಲಗದ ಹಾವಳಿಯಿಂದಾಗಿ ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.