ಸೋಮವಾರಪೇಟೆ, ಡಿ. 12 : ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ತಾಲೂಕಿನ ತೋಳೂರುಶೆಟ್ಟಳ್ಳಿಯಲ್ಲಿ ರೂ. 24 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆಯ ಕಾಮಗಾರಿಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪರಿಶೀಲಿಸಿದರು.
ಮುಂದಿನ ಎರಡು ತಿಂಗಳಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವಸತಿ ಶಾಲೆಯನ್ನು ಉದ್ಘಾಟಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಪ್ರಾರಂಭಿಕ ಹಂತದಲ್ಲಿ ಈಗಾಗಲೇ 24 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದೀಗ ಕಾಮಗಾರಿಯ ವೆಚ್ಚ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ 3 ಕೋಟಿ ಮಂಜೂರು ಮಾಡಲಾಗಿದೆ. ಒಟ್ಟು 27 ಕೋಟಿ ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ. ಇನ್ನೂ ಸಹ ಆವರಣಗೋಡೆ, ಮೈದಾನದ ಕಾಮಗಾರಿ ಬಾಕಿಯಿದ್ದು, ಇದಕ್ಕೆ ಹೆಚ್ಚುವರಿಯಾಗಿ 3 ಕೋಟಿ ಅವಶ್ಯಕತೆಯಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅನುದಾನ ಲಭ್ಯತೆಯ ಆಧಾರದ ಮೇರೆ ಆ ಕಾಮಗಾರಿಗಳನ್ನೂ ಕೈಗೊಳ್ಳಲಾಗುವುದು ಎಂದರು.
ಮಡಿಕೇರಿಯಲ್ಲಿ 400 ಬೆಡ್‍ಗಳ ಸಾಮಥ್ರ್ಯದ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದರೊಂದಿಗೆ ತುರ್ತು ಚಿಕಿತ್ಸಾ ಆಸ್ಪತ್ರೆಯ ಕಾಮಗಾರಿಗೂ ಚಾಲನೆ ನೀಡಲಾಗಿದೆ. ತೋಳೂರುಶೆಟ್ಟಳ್ಳಿಯಲ್ಲಿ 27 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣವಾಗುತ್ತಿದೆ. ಈ ಮೂರರ ಉದ್ಘಾಟನೆಗೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು ಎಂದು ಶಾಸಕರು ಮಾಹಿತಿ ನೀಡಿದರು.
ಮಳೆಯಿಂದಾಗಿ ವಸತಿ ಶಾಲೆಯ ಕಾಮಗಾರಿ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮುಂದಿನ 2 ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದ ರಂಜನ್, ತೋಳೂರುಶೆಟ್ಟಳ್ಳಿ ವ್ಯಾಪ್ತಿಗೆ ಸರ್ಕಾರ ಈ ಮಟ್ಟದ ಕೊಡುಗೆ ನೀಡಿದೆ. ಈ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗೆ ಉತ್ತೇಜನ ನೀಡಿದಂತಾಗಿದೆ. ಈ ಹಿಂದೆ ಬೆಟ್ಟದಳ್ಳಿಯಲ್ಲಿ ಸೈನಿಕ ಶಾಲೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿತ್ತು. ಕೆಲವೊಂದು ಕಾರಣಗಳಿಂದ ಅನುಷ್ಠಾನವಾಗಲಿಲ್ಲ. ಆದರೆ ತೋಳೂರುಶೆಟ್ಟಳ್ಳಿಯಲ್ಲಿ ಜಾಗ ದೊರೆತಿದ್ದರಿಂದ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಲು ಅವಕಾಶ ದೊರೆತಿದೆ. ಈ ಭಾಗದ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದು ರಂಜನ್ ಹೇಳಿದರು.
ಶಾಂತಳ್ಳಿಯಲ್ಲಿ ಈ ಹಿಂದೆ ಪದವಿ ಪೂರ್ವ ಕಾಲೇಜು ಸ್ಥಾಪಿಸಿದ್ದು, ನಂತರ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಇಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಶೈಕ್ಷಣಿಕ ಯೋಜನೆಯನ್ನು ಅನುಷ್ಠಾನಗೊಳಿಸುವ ಚಿಂತನೆಯಿದೆ ಎಂದ ಶಾಸಕರು, ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್, ಅಭಿವೃದ್ಧಿ ಅಧಿಕಾರಿ ಮಂಜುಳಾ, ಸದಸ್ಯರಾದ ಮೋಹಿತ್, ರುದ್ರಪ್ಪ, ದಿವ್ಯ, ಪ್ರವೀಣ್, ಪ್ರಮುಖರಾದ ಕೆ.ಕೆ. ಸುಧಾಕರ್, ರಾಜಗೋಪಾಲ್, ಪರಮೇಶ್ವರ್, ಮಾಚಯ್ಯ, ದಿವಾಕರ್, ಉಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.