ಸಿದ್ದಾಪುರ, ಡಿ. 12 : ಸಿದ್ದಾಪುರದ ಕರಡಿಗೋಡು ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಕರಡಿಗೋಡು ಗ್ರಾಮದ ನಿವಾಸಿಯಾಗಿರುವ ಕೆ.ಪಿ ದೇವಯ್ಯ ಎಂಬವರ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸಿವೆ. ಅಲ್ಲದೇ ಮನೆಯ ಅಂಗಳದಲ್ಲಿ ಕಾಡಾನೆಗಳು ರಾತ್ರಿ ಸುತ್ತಾಡುತ್ತಾ ಆತಂಕ ಸೃಷ್ಟಿಸಿವೆ. ಕಾಡಾನೆಗಳು ಸುತ್ತಾಡುತ್ತಿರುವ ದೃಶ್ಯಗಳು ಅವರ ಮನೆಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖಾ ಧಿಕಾರಿಗಳನ್ನು ಒತ್ತಾಯಿಸಿದ್ದಾರೆ.