*ಗೋಣಿಕೊಪ್ಪ, ಡಿ. ೧೦: ೨ ಕೋಟಿ ೫೦ ಲಕ್ಷ ಅನುದಾನಲ್ಲಿ ಕೆ. ಬಾಡಗ- ಮಂಚಳ್ಳಿ ಮತ್ತು ಹೈಸೊಡ್ಲೂರು-ಬಾಳೆಲೆ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ವಿದ್ಯುತ್ ಲೈನ್ ಕಾಮಗಾರಿ ಪ್ರಾರಂಭಕ್ಕೆ ಶಾಸಕ ಕೆ.ಜಿ. ಬೋಪಯ್ಯ ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.

ಕೆ. ಬಾಡಗ ಮತ್ತು ಮಂಚಳ್ಳಿ ಸಂಪರ್ಕ ರಸ್ತೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಮಂಡಳಿಯ ಅನುದಾನದಲ್ಲಿ ನಡೆಯಲಿರುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆ. ಬಾಡಗ ವ್ಯಾಪ್ತಿಯಲ್ಲಿ ೩೩೨ ಕಂಬಗಳ ಅಳವಡಿಕೆಯೊಂದಿಗೆ ೧೧.೫ ಕಿ.ಮೀ ವ್ಯಾಪ್ತಿಯಲ್ಲಿ ಎಪ್ಪತ್ತೊಂದು ಲಕ್ಷದ ಏಳು ಸಾವಿರದ ಐದುನೂರು ರೂಪಾಯಿಗಳ ಅನುದಾನದಲ್ಲಿ ಎಕ್ಸ್ಪ್ರೆಸ್ ಲೈನ್ ಕಾಮಗಾರಿ ನಡೆಯಲಿದೆ. ಮಂಚಳ್ಳಿ ಫೀಡರ್‌ನ ವ್ಯಾಪ್ತಿಗೆ ಒಳಪಟ್ಟಂತೆ ೧೬೩ ಕಂಬಗಳನ್ನು ಅಳವಡಿಸಿ ೧೦.೧ ಕಿ.ಮೀವರೆಗೆ ೬೩ ಲಕ್ಷದ ೬೩ ಸಾವಿರದ ೭೦೦ ರೂಪಾಯಿ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಅದೇ ರೀತಿ ಹೈಸೊಡ್ಲೂರು- ಬಾಳೆಲೆಯ ಮಾರ್ಗದಲ್ಲಿ ೮೪ ಕಂಬಗಳನ್ನು ಅಳವಡಿಸಿ ೨.೯ ಕಿ.ಮೀ ವಿದ್ಯುತ್ ಲೈನ್ ಅಳವಡಿಕೆ, ೧೨ ಲಕ್ಷದ ೫೪ ಸಾವಿರದ ೪೧೭ ರೂಪಾಯಿಗಳ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಎಕ್ಸ್ಪ್ರೆಸ್ ಲೈನ್‌ನ ಪ್ರಯೋಜನ ಇಡೀ ಗ್ರಾಮಕ್ಕೆ ಲಭ್ಯವಾಗಲಿದ್ದು, ಈ ಭಾಗದ ಜನರ ವಿದ್ಯುತ್ ಸಮಸ್ಯೆಯನ್ನು ನೀಗಿಸಲಿದೆ ಎಂದು ತಿಳಿಸಿದರು.

ಮಳೆಯಿಂದಾಗಿ ಹಲವಷ್ಟು ಕಾಮಗಾರಿಗಳನ್ನು ನಿಧಾನ ಗತಿಯನ್ನು ಅನುಸರಿಸುತ್ತಿದೆ. ಹೀಗಾಗಿ ರಸ್ತೆ ಇನ್ನಿತರ ಕೆಲವು ಅಭಿವೃದ್ದಿ ಕಾಮಗಾರಿಗಳು ನಡೆಸಲು ವಿಳಂಬವಾಗುತ್ತಿದೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಕೆ. ಬಾಡಗ ವ್ಯಾಪ್ತಿಯ ಶಕ್ತಿ ಕೇಂದ್ರದ ಪ್ರಮುಖ್ ಪೆಮ್ಮಣಮಾಡ ನವೀನ್, ತಾಲೂಕು ಪ್ರಚಾರಕ ಪೆಮ್ಮಣಮಾಡ ರಮೇಶ್, ಕೆ.ಬಾಡಗ ಗ್ರಾ.ಪಂ. ಉಪಾಧ್ಯಕ್ಷೆ ರೀಟಾ, ಸದಸ್ಯ ರಿತೇಶ್, ಸೆಸ್ಕಾಂ ಹಿರಿಯ ಇಂಜಿನಿಯರ್ ನೀಲ್ ಶೆಟ್ಟಿ, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.