ನಾಪೋಕ್ಲು, ಡಿ.೧೧: ಸ್ಥಳೀಯ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್‌ನಲ್ಲಿ ‘ಹುತ್ತರಿ ಕೋಲಾಟ’ ಸಂಭ್ರಮದಿAದ ನಡೆಯಿತು.

ನಾಪೋಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡAತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್‌ನಲ್ಲಿ ಹುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶ್ರೀ ಶಾಸ್ತಾವು ದೇವಾಲಯದಿಂದ ಸಂಪ್ರದಾಯದAತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ಕಳಿ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್‌ನತ್ತ ಹೆಜ್ಜೆ ಹಾಕಿದರು. ಹಿರಿಯರ ಕಾಲದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಮೆರವಣಿಗೆಯ ನಡುವೆ ಕುರುಂಬರಾಟ್ ಬನದಲ್ಲಿ ವಿಶ್ರಾಂತಿಯನ್ನು ಪಡೆದು ಮಧ್ಯಾಹ್ನ ನೂರಂಬಾಡ ಮಂದ್ ತಿರುವಾಭರಣದೊಂದಿಗೆ ಆಗಮಿಸಿದ ಗ್ರಾಮದ ತಕ್ಕಮುಖ್ಯಸ್ಥರನ್ನು ಸ್ಥಳೀಯ ಗ್ರಾಮದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಸ್ವಾಗತಿಸಿದ ಬಳಿಕ ಪ್ರದಕ್ಷಿಣೆಯೊಂದಿಗೆ ವಿಧಿ ವಿಧಾನ ಕಟ್ಟುಪಾಡುಗಳನ್ನು ನೆರವೇರಿಸಿ ಹುತ್ತರಿ ಕೋಲಾಟಕ್ಕೆ ಚಾಲನೆ ದೊರಕಿತು.

ಮೂರು ಗ್ರಾಮದ ತಕ್ಕಮುಖ್ಯಸ್ಥರು, ಗ್ರಾಮಸ್ಥರು ಮಂದ್‌ಗೆ ಪ್ರದಕ್ಷಿಣೆ ಬರುವುದರೊಂದಿಗೆ ‘ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ಪೊಯಿಲೆ ಪೊಯಿಲೆ’ ‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೆ ಪೊಯಿಲೆ, ಪೋಪಕ ಪುತ್ತರಿ ಎಣ್ಣತೆ ಪೋಚಿ ಪೊಯಿಲೆ ಪೊಯಿಲೆ.. ಉದ್ಘೋಷ ಮಂದ್‌ನ ಉದ್ದಕ್ಕೂ ಪಸರಿಸಿತು. ಗ್ರಾಮಸ್ಥರ ಉತ್ಸಾಹ, ಹಷೋದ್ಘಾರಗಳ ನಡುವೆ ನೂರಂಬಾಡ ಮಂದ್ ಹುತ್ತರಿ ಕೋಲಾಟ ಸಂಭ್ರಮವನ್ನು ನೆರೆದ ಮಂದಿ ಮನದುಂಬಿಕೊAಡರು. ನಾಪೋಕ್ಲು, ಕೊಳಕೇರಿ ಬೇತು ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದ ಈ ನಾಡ್ ಮಂದ್‌ನಲ್ಲಿ ದೊಡ್ಡ ಕೋಲು ಮತ್ತು ಸಣ್ಣ ಕೋಲು ಎರಡು ದಿನ ಕೋಲಾಟ ನಡೆಸಿ ನಂತರ ಮಕ್ಕಿ ಶ್ರೀ ಶಾಸ್ತಾವು ದೇವಾಲಯದಲ್ಲಿ ಕೋಲು ಒಪ್ಪಿಸುವ ಪದ್ಧತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊAಡಿತು. ಈ ಸಂದರ್ಭ ಮೂರು ಗ್ರಾಮಗಳ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಸಾಂಪ್ರದಾಯಿಕ ಕೋಲಾಟಗಳು ಜನಸಾಗರವನ್ನು ಮಂತ್ರಮುಗ್ಧ ಗೊಳಿಸಿತು.

ಕಾಪಳಕಳಿ : ಹುತ್ತರಿ ಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಮಹತ್ವ ಇದೆ. ಹುತ್ತರಿ ಹಬ್ಬದಂದು ಬೇತು ಗ್ರಾಮದ ಮಕ್ಕಿ ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ. ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೇ ಕೋಲು ಹಿಡಿದು ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಕೋಲಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಕೋಲಾಟ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಾರೆ.

-ದುಗ್ಗಳ ಸದಾನಂದ