ಮಡಿಕೇರಿ, ಡಿ. ೧೦: ಜಿಲ್ಲಾ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ಮಡಿಕೇರಿ ರೋಟರಿ ಹಾಲ್‌ನಲ್ಲಿ ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಹಾಗೂ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದು ಒಟ್ಟು ೬೧ ಜನ ರಕ್ತದಾನ ಹಾಗೂ ೧೬ ಜನ ನೇತ್ರದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಅಬಕಾರಿ ನಿರೀಕ್ಷಕಿ ಸ್ವರ್ಣಶ್ರೀ ವಿ. ಮಾತನಾಡಿ, ರಕ್ತ ಮತ್ತು ನೇತ್ರದ ಬೇಡಿಕೆ ಭಾರತದಲ್ಲಿ ತುಂಬಾ ಇದ್ದು ಜನರಿಗೆ ಮಾಹಿತಿ ಕೊರತೆಯಿಂದಾಗಿ ಬೇಡಿಕೆಯ ಪೂರೈಕೆ ಸಾಧ್ಯವಾಗುತ್ತಿಲ್ಲ. ವಿಜ್ಞಾನ ಅಭಿವೃದ್ಧಿಯಾದರು ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ರಕ್ತದಾನ ಹಾಗೂ ನೇತ್ರದಾನದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.

ಜಿಲ್ಲಾ ರಕ್ತನಿಧಿ ಕೇಂದ್ರ ಅಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ಈ ರೀತಿ ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚು ಆಯೋಜಿಸಿದರೆ ಹೆಚ್ಚು ರಕ್ತ ಸಂಗ್ರಹವಾಗಿ ಸಾಕಷ್ಟು ರೋಗಿಗಳಿಗೆ ರಕ್ತ ಪೂರೈಕೆಯಾಗಿ ಜೀವ ಉಳಿಸಬಹುದಾಗಿದ್ದು, ಯುವ ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆಕೊಟ್ಟರು.

ಜಿಲ್ಲಾ ನೇತ್ರನಿಧಿ ಕೇಂದ್ರದ ಡಾ. ಕೃಪಾಲಿನಿ ಮಾತನಾಡಿ, ನೇತ್ರದಾನದ ಮಹತ್ವದ ಬಗ್ಗೆ ಹಾಗೂ ಯಾರು ಯಾವಾಗ ನೇತ್ರದಾನ ಮಾಡಬಹುದು ಎಂಬ ಮಾಹಿತಿ ನೀಡಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಸುನೀತಾ ಮುತ್ತಣ್ಣ ಮಾತನಾಡಿ, ಏಡ್ಸ್ ಹರಡದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ರೋಟೇರಿಯನ್ ಕಾರ್ಯಪ್ಪ ಮಾತನಾಡಿ, ಈ ರೀತಿಯ ಶಿಬಿರಗಳು ಸಮಾಜಕ್ಕೆ ಅತ್ಯಗತ್ಯವಾಗಿದ್ದು ಇಂತಹ ಸಮಾಜ ಸೇವೆಗೆ ರೋಟರಿ ಸಂಸ್ಥೆ ಯಾವಾಗಲೂ ಸಹಕಾರ ನೀಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಇತರ ಗಣ್ಯರು, ಅಬಕಾರಿ ಇಲಾಖೆ ಸಿಬ್ಬಂದಿ ಇದ್ದರು.