ಮಡಿಕೇರಿ, ಡಿ.೧೧ : ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ ಸಮಿತಿ, ತಾಲೂಕು ಸಮಿತಿ ಹಾಗೂ ಹೋಬಳಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭೆಯು ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳ ಸಮ್ಮತಿಯಂತೆ ಜಿಲ್ಲಾ ಕೇಂದ್ರದಲ್ಲಿ ತುಳು ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ೧೫ಕ್ಕೂ ಹೆಚ್ಚು ತುಳು ಭಾಷಿಕ ಸಮುದಾಯವಿದ್ದು, ಸುಮಾರು ೧.೫೦ ಲಕ್ಷಕ್ಕಿಂತಲೂ ಹೆಚ್ಚು ತುಳು ಭಾಷಿಕರಿದ್ದಾರೆ. ಎಲ್ಲಾ ತುಳು ಸಮುದಾಯವನ್ನು ಒಂದೇ ವೇದಿಕೆಯಡಿ ತರಲು ತುಳು ಸಮ್ಮೇಳನ ನಡೆಸುವುದು ಸೂಕ್ತ ಎಂದು ಅಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಸೇರಿದಂತೆ ಎಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯದಲ್ಲೇ ಎಲ್ಲಾ ತುಳು ಸಮುದಾಯದ ಅಧ್ಯಕ್ಷರು ಹಾಗೂ ತುಳುಕೂಟದ ಎಲ್ಲಾ ಸಮಿತಿ ಸದಸ್ಯರ ಸಭೆ ಕರೆದು ದಿನಾಂಕ ನಿಗದಿ ಮಾಡಲು ಮತ್ತು ಸಮ್ಮೇಳನದ ರೂಪುರೇಷೆ ತಯಾರಿಸಲು ನಿರ್ಧಾರ ಕೈಗೊಳ್ಳಲಾಯಿತು. ತುಳುವೆರ ಜನಪದ ಕೂಟದ ಹೋಬಳಿ, ಗ್ರಾಮ ಮತ್ತು ನಗರ ಸಮಿತಿಯ ಸದಸ್ಯತ್ವವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಕೂಟದ ಸ್ಥಾಪಕ ಕಾರ್ಯದರ್ಶಿ ಹರೀಶ್ ಆಳ್ವ ಮಂಗಳೂರು, ಜಿಲ್ಲಾ ಉಪಾಧ್ಯಕ್ಷ ಬಿ.ವೈ. ಆನಂದ ರಘು, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ, ಖಜಾಂಚಿ ಪ್ರಭು ರೈ, ಮಡಿಕೇರಿ ನಗರ ಅಧ್ಯಕ್ಷೆ ಸಾವಿತ್ರಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ಶಬರಿ ಶೆಟ್ಟಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಶಾಂತ್, ಮಡಿಕೇರಿ ತಾಲೂಕು ಸಂಚಾಲಕ ಪ್ರಸಾದ್ ಬಿಳಿಗೇರಿ, ಉಪಾಧ್ಯಕ್ಷ ಪಿ.ಸಿ. ಲೋಹಿತ್, ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ. ಮೋಹನ್, ಜಯಪ್ಪ, ಬಿ.ಎಸ್. ಪುರುಷೋತ್ತಮ, ಅಶೋಕ್ ಆಚಾರ್ಯ, ಕಿರಣ್, ವಿನೋದ್ ಪೂಜಾರಿ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ವೆಂಕಪ್ಪ ಪೂಜಾರಿ, ಸದಸ್ಯರಾದ ಇಂದಿರಾ ರಮೇಶ್ ಸೇರಿದಂತೆ ವಿವಿಧ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು. ತುಳುವೆರ ಜನಪದ ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ನಿರೂಪಿಸಿ, ವಂದಿಸಿದರು.