ಕೂಡಿಗೆ, ಡಿ. ೧೦: ಕೂಡಿಗೆ ಸಮೀಪದ ಯಡವನಾಡು ಮಾವಿನಹಳ್ಳ ಹಾರಂಗಿಗೆ ತೆರಳುವ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ಐಗೂರು ಗ್ರಾಮ ಪಂಚಾಯಿತಿ ಅಂಚಿನ ಸರಹದ್ದಿನ ಗ್ರಾಮದ ಸಾರ್ವಜನಿಕ ಸಂಪರ್ಕ ರಸ್ತೆಯ ಕಿರು ಸೇತುವೆಯು ಕಳೆದ ಆರು ತಿಂಗಳ ಹಿಂದೆ ಹಾನಿಗೀಡಾಗಿದೆ. ಮಳೆಯಿಂದಾಗಿ ಮೇಲ್ಭಾಗದ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಭಾರೀ ನೀರಿನ ಸೆಳೆತಕ್ಕೆ ಕಿರು ಸೇತುವೆಯು ಮೊದಲು ಒಂದು ಭಾಗ ಕುಸಿತಗೊಂಡು ಅರಣ್ಯ ಪ್ರದೇಶದಿಂದ ಬಂದ ನೀರಿನ ಸೆಳೆತಕ್ಕೆ ಹಾನಿಗೊಂಡಿದೆ. ಈ ವ್ಯಾಪ್ತಿಯ ಗ್ರಾಮಗಳಾದ ಮಾವಿನಹಳ್ಳ ಯಡವನಾಡು ಹಾರಂಗಿ ವ್ಯಾಪ್ತಿಯ ೪೦ ಕುಟುಂಬಗಳ ಸದಸ್ಯರು ಸೇರಿದಂತೆ ಸಾರ್ವಜನಿಕರು ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಆದರೆ, ಕಳೆದ ಆರು ತಿಂಗಳುಗಳ ಹಿಂದೆ ಈ ಕಿರುಸೇತುವೆ ಕುಸಿತಗೊಂಡು ನಂತರ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಿಪಡಿಸುವ ಭರವಸೆ ನೀಡಿದರೂ ಇದುವರೆಗೂ ಪ್ರಯೋಜನವಾಗಿಲ್ಲ ಎಂಬುದು ಮಾವಿನಹಳ್ಳ ಮತ್ತು ಯಡವನಾಡು ಗ್ರಾಮಸ್ಥರ ಆರೋಪವಾಗಿದೆ.

ಈ ರಸ್ತೆಯನ್ನೇ ಅವಲಂಬಿಸಿದ ೪೦ಕ್ಕೂ ಹೆಚ್ಚು ಕುಟುಂಬದವರು ಮತ್ತು ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಸೋಮವಾರಪೇಟೆಗೆ ಅಥವಾ ಕುಶಾಲನಗರ, ಕೂಡಿಗೆಗೆ ಬರಲು ಅನುಕೂಲವಾಗುವಂತೆ ಮತ್ತು ಹತ್ತಿರದ ದಾರಿಯಾಗಿರುವುರಿಂದ ಗ್ರಾಮಸ್ಥರೇ ಕುಸಿತಗೊಂಡ ಕಿರು ಸೇತುವೆಗೆ ಹಳೆಯ ವಿದ್ಯುತ್ ಕಂಬಗಳನ್ನು ಮತ್ತು ಮರದ ಕೊಂಬೆಗಳನ್ನು ಹಾಕಿಕೊಂಡು ಅದರ ಮೇಲೆ ತಾತ್ಕಾಲಿಕವಾಗಿ ತಿರುಗಾಟ ಮಾಡುತ್ತಿದ್ದರು. ಇದೀಗ ಈ ವ್ಯಾಪ್ತಿಯ ಸಾರ್ವಜನಿಕರು, ಶಾಲಾ - ಕಾಲೇಜು ವಿದ್ಯಾರ್ಥಿಗಳು ಯಡವನಾಡು ಸರ್ಕಲ್‌ಗೆ ಬಂದು ಅತ್ತಿಂದಿತ್ತ ತೆರಳುವಂತಾಗಿದೆ.

ಯಡವನಾಡು ಸರ್ಕಲ್ ನಿಂದ ಈ ಗ್ರಾಮಗಳಿಗೆ ಹೋಗಬೇಕಾದರೆ ಈ ಕಿರು ಸೇತುವೆಯನ್ನು ದಾಟಿದರೆ ಹತ್ತಿರದ ದಾರಿಯಾಗಿದೆ. ಕಿರು ಸೇತುವೆಯ ದುರಸ್ತಿಗೊಂಡಿರುವ ಅಂತರ ೫೦ ಮೀಟರ್‌ಗಳಷ್ಟಿದ್ದು, ವಾಹನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೆ ೫ ಕಿಲೋಮೀಟರ್ ದೂರವನ್ನು ಸುತ್ತಿಬಂದು ಯಡವನಾಡು ಸರ್ಕಲ್‌ಗೆ ಅಥವಾ ಐಗೂರು ಗ್ರಾಮಗಳ ಸಂಪರ್ಕ ರಸ್ತೆಗೆ ಹೋಗಬೇಕಾಗುತ್ತದೆ. ಈ ಭಾಗದಲ್ಲಿ ಕೃಷಿ ಆಧಾರಿತ ಬಡ ಕುಟುಂಬದ ರೈತರು ಇದ್ದಾರೆ, ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಗಳು ಆಗುತ್ತಿವೆ ಎಂದು ಈ ವ್ಯಾಪ್ತಿಯ ರೈತರು ಮತ್ತು ಗ್ರಾಮಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಸಂಬAಧಿಸಿದ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ಕಿರು ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ವ್ಯಾಪ್ತಿಯ ಗ್ರಾಮಸ್ಥರ, ವಿದ್ಯಾರ್ಥಿಗಳ ತಿರುಗಾಟಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ