ಸುಂಟಿಕೊಪ್ಪ, ಡಿ. ೯: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ೪ ಸದಸ್ಯರು ಪಂಚಾಯಿತಿಯ ವಿರುದ್ಧ ಕೆಲ ಆರೋಪ ಮಾಡಿ ಸಾಮಾನ್ಯ ಸಭೆ ಬಹಿಷ್ಕಾರ ಮಾಡಿದ ವಿಚಾರವಾಗಿ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹಾಗೂ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ಸದಸ್ಯರುಗಳಾದ ಸೋಮನಾಥ, ಶಾಂತಿ, ಹಸೀನ ಹಾಗೂ ಮಂಜುಳ ನ. ೩೦ ರಂದು ಪಂಚಾಯಿತಿಯ ಸಾಮಾನ್ಯ ಸಭೆಗೆ ಹಾಜರಾಗಿರುವುದಿಲ್ಲ ಮತ್ತು ಸಭಾ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವುದಿಲ್ಲ. ಆದಾಗ್ಯೂ ಸಭೆಯನ್ನು ಬಹಿಷ್ಕರಿಸಿರುವುದಾಗಿ ಹೇಳಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ನಮೂನೆ ೯ ಮತ್ತು ೧೧ ಎ ವಿತರಿಸಲು ಕೋರಿ ಗ್ರಾಮಸ್ಥರು ಸಲ್ಲಿಸಿರುವ ಅರ್ಜಿಗಳನ್ನು ಸರಕಾರದ ನಿಯಮಾವಳಿಯಂತೆ ಮತ್ತು ಪಂಚಾಯಿತಿಯ ಸಾಮಾನ್ಯ ಮಂಡಿಸಿ ನಿರ್ಣಯ ಕೈಗೊಂಡು ನಿಯಮಾನುಸಾರ ವಿತರಿಸಲಾಗುತ್ತಿದೆ. ದಾಖಲಾತಿ ಮೂಲಕವೇ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಯಾವುದೇ ಕೆಲಸವನ್ನು ನಿರ್ವಹಿಸುತ್ತಿಲ್ಲ ಆಗಿದ್ದಲ್ಲಿ ಸಾಬೀತುಪಡಿಸಲಿ ಎಂದು ಸವಾಲೆಸೆದಿದ್ದಾರೆ.
ಗ್ರಾಮ ಪಂಚಾಯಿತಿಗೆ ಸೇರಬೇಕಾದ ಆಸ್ತಿಯನ್ನು ಸರ್ವೆ ಮಾಡಿಸಿ ಹದ್ದುಬಸ್ತಿಗೆ ತೆಗೆದುಕೊಳ್ಳಲು ಮತ್ತು ಸಾಮಾನ್ಯ ಸಭೆಗಳಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಯಾರದೇ ಸದಸ್ಯರ ಅಣತಿಯಂತೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸದೇ ಪಂಚಾಯಿತಿಯ ಎಲ್ಲಾ ವಾರ್ಡ್ಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಅಧ್ಯಕ್ಷೆ ಶಿವಮ್ಮ ತಿಳಿಸಿದ್ದಾರೆ.
ಸೋಮನಾಥ ಅವರು ತಮ್ಮ ವೈಯಕ್ತಿಕ ಕಾರ್ಯಗಳಿಗೆ ಮಾತ್ರ ಪಂಚಾಯಿತಿಗೆ ಬರುತ್ತಾರೆಯೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ವೈಯಕ್ತಿಕ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿರುವ ಅವರು, ಆರೋಪ ಮಾಡಿರುವ ಸದಸ್ಯರುಗಳ ವಾರ್ಡ್ನಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದಾಗ್ಯೂ ಇವರಿಬ್ಬರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ.
ಮತ್ತೋರ್ವ ಸದಸ್ಯೆ ಹಸೀನಾ ತಮ್ಮ ಸಂಬAಧಿಕರಿಗೆ ಹಸಿ ಮೀನು ಮಾರಾಟಕ್ಕೆ ಅವಕಾಶ ನೀಡಿಲ್ಲ ಎಂದು ಗ್ರಾ.ಪಂ. ವಿರುದ್ಧ ಆರೋಪಿಸುತ್ತಿದ್ದಾರೆ. ಸದಸ್ಯೆ ಮಂಜುಳ ಪಂಚಾಯಿತಿ ನಿಧಿಯಿಂದ ತಮ್ಮ ಮನೆಗೆ ವೈಯಕ್ತಿಕವಾಗಿ ಇಂಗು ಗುಂಡಿಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಇದು ನಿಯಮಬಾಹಿರವಾಗಿರುವುದರಿಂದ, ಈ ಕಾಮಗಾರಿಯ ಬಿಲ್ ಪಾವತಿಸದೇ ತಡೆಹಿಡಿಯಲಾಗಿದೆ. ಇದಕ್ಕಾಗಿ ಅವರು ತಮ್ಮ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಪ್ರಸಾದ್ ಕುಟ್ಟಪ್ಪ ದೂರಿದ್ದಾರೆ.
ವೈಯಕ್ತಿಕ ಹಿತಾಸಕ್ತಿಯ ಕಾರಣಕ್ಕಾಗಿಯೇ ಪಂಚಾಯಿತಿ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಸದಸ್ಯರುಗಳಾದ ರಫೀಕ್ ಖಾನ್, ಶಬ್ಬೀರ್, ಮಂಜುನಾಥ್, ಆಲಿಕುಟ್ಟಿ, ಸೆಬಾಸ್ಟೀನ್ ಹಾಗೂ ರೇಷ್ಮ ಇತರ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.