ಪೊನ್ನಂಪೇಟೆ, ಡಿ. ೧೦: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಪೋಷಕರ ಮತ್ತು ಅಧ್ಯಾಪಕರ ಸಭೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ. ಇಟ್ಟಿರ ಕೆ. ಬಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೋಷಕರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಮಾಡಬೇಕು.
ಸಾಧ್ಯವಾದರೆ ತಿಂಗಳಿಗೊಮ್ಮೆ ಕಾಲೇಜಿಗೆ ಬಂದು ಉಪನ್ಯಾಸಕರನ್ನು ಭೇಟಿ ಮಾಡಿ ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೊಂಡಿದ್ದ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ಪೋಷಕರು ತಮ್ಮ ಮಕ್ಕಳ ದಿನಚರಿಯ ಬಗ್ಗೆ ಗಮನವಿಡಬೇಕು. ಮಕ್ಕಳು ಕಾಲೇಜಿನಿಂದ ಮನೆಗೆ ಬಂದಾಗ ಅವರ ಬ್ಯಾಗ್ನಲ್ಲಿ ಏನಿದೆ ಎಂಬುದನ್ನು ಪರೀಕ್ಷಿಸಬೇಕು. ಸಮಯ ಪಾಲನೆ ಹಾಗೂ ಶಿಸ್ತನ್ನು ಪಾಲಿಸುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದರು. ಪೋಷಕ ಮತ್ತು ಅಧ್ಯಾಪಕರ ಸಂಘದ ಉಪಾಧ್ಯಕ್ಷ ಆಲೆಮಾಡ ಸುಧೀರ್, ಸದಸ್ಯರಾದ ವಿಶಾಲಾಕ್ಷಿ, ರಾಣಿ, ಗಾಯತ್ರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ನಡೆದ ಎನ್ಸಿಸಿ, ಟಿಸಿಹೆಚ್ ಕ್ಯಾಂಪ್ನಲ್ಲಿ ಕೊಡಗಿನಿಂದ ಭಾಗವಹಿಸಿದ್ದ ಏಕೈಕ ಎನ್ಸಿಸಿ ಕೆಡೆಟ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನನ್ಯ, ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ೩ನೇ ಸ್ಥಾನ ಪಡೆದ ಪ್ರಜ್ವಲ್ ಹಾಗೂ ೪ನೇ ಸ್ಥಾನ ಪಡೆದ ಎಂ.ಹೆಚ್. ಪ್ರಜ್ಞಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪೋಷಕರ ಮತ್ತು ಅಧ್ಯಾಪಕರ ಸಂಘದ ಸಂಚಾಲಕರಾದ ಸಬ್ನ ಸೋಮಯ್ಯ, ಜಸಿಂತ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಪಿ.ಎಸ್. ದಿವ್ಯ, ಹಿರಿಯ ಉಪನ್ಯಾಸಕಿ ಎಂ.ಕೆ. ಪದ್ಮ, ಉಪನ್ಯಾಸಕರು ಹಾಗೂ ಪೋಷಕರು ಇದ್ದರು.