ಡಿಸೆಂಬರ್ ೧ ರ ಗುರುವಾರದ ಸುಂದರ ಸಂಜೆ. ಮಡಿಕೇರಿಯ ಗಾಂಧಿ ಮೈದಾನದ ವರ್ಣರಂಜಿತ ವೇದಿಕೆಯಲ್ಲಿ ಮಾಗಿಯ ಚುಮುಚುಮು ಚಳಿಯ ನಡುವೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟ ಪುಟಾಣಿಗಳಿಂದ ಮನಮೋಹಕ ನೃತ್ಯ. ಸಂತ ಮೈಲಕರ ಪ್ರೌಢಶಾಲೆಗೆ ೭೫ ವರ್ಷ ತುಂಬಿದ ಸಂಭ್ರಮ, ಜೊತೆಗೆ ಶಾಲಾ ವಾರ್ಷಿಕೋತ್ಸವದ ಸಮಾರಂಭ ಅದಾಗಿತ್ತು. ಮಕ್ಕಳ ಮನಮೋಹಕ ನೃತ್ಯ ಪ್ರದರ್ಶನದ ನಡುವೆ ನನ್ನ ಬಾಲ್ಯದ ಚಿತ್ರಣ ಅನಾವರಣವಾಗತೊಡಗಿತ್ತು. ೧೯೭೩ರಿಂದ ೧೯೮೦ರವರೆಗೆ ಈ ಶಾಲೆಯಲ್ಲಿಯೇ ನನ್ನ ವಿದ್ಯಾಭ್ಯಾಸ. ನಲಿ-ಕಲಿಯ ಆ ಬಾಲ್ಯ. ಆಟ-ಹುಡುಗಾಟದ ಆ ದಿನಗಳಲ್ಲಿ ನಮ್ಮನ್ನು ಸಮರ್ಥವಾಗಿ ತಿದ್ದಿ ತೀಡಿದ ಶಿಕ್ಷಕ ವೃಂದ, ಒಡನಾಡಿ ಸಹಪಾಠಿಗಳು ಒಬ್ಬೊಬ್ಬರೂ ಸ್ಪೃತಿ ಪಟಲದಲ್ಲಿ ಮೂಡಲಾರಂಭಿಸಿದರು.

‘‘ನಿನ್ನ ಜೇಬಿಗೆ ರೂ. ೧೦೦ ಸೇರಿಸಿದರೆ ಅದು ‘ಪ್ಲಸ್’ (+) ನಿನ್ನ ಜೇಬಿನಿಂದ ರೂ. ೫೦ ತೆಗೆದು ವೆಚ್ಚ ಮಾಡಿದರೆ ಅದು ಮೈನಸ್ (-) ಎಂದು ಸಂಕಲನ, ವ್ಯವಕಲನವನ್ನು ಆಸಕ್ತಿದಾಯಕವಾಗಿ ಮನಮುಟ್ಟುವಂತೆ ಮನನ ಮಾಡುವುದರ ಜೊತೆಗೆ ಗಣಿತದಲ್ಲಿ ವಿಷಯಾಸಕ್ತಿ ಮೂಡಿಸಿದ ಶಿಕ್ಷಕರ ಪರಿಣಾಮಕಾರಿ ಬೋಧನಾ ಕ್ರಮ ನೆನಪಾಯಿತು.

ಪಾದ್ರಿ ನೊರೊನ್ಹಾ, ನಂತರ ಪಾದ್ರಿ ಕೊಲಾಸೋ ಅವರ ಮಾರ್ಗದರ್ಶನದಲ್ಲಿ ಮುಖ್ಯ ಶಿಕ್ಷಕಿ ಸ್ಟೆಲ್ಲಾ ಮೇರಿ ನೇತೃತ್ವದಲ್ಲಿ ಮೇಬಲ್‌ವಾಸ್ ಟೀಚರ್, ಆ್ಯನಿ ಟೀಚರ್, ತೆರೇಸಾ ಟೀಚರ್, ಮಲ್ಸಿನ್ ಟೀಚರ್, , ಲಕ್ಷö್ಮಣ್ ಮಾಸ್ಟರ್, ಜೂಲಿಯನ್ ಸಿಸ್ಟರ್, ಸಿಸ್ಟರ್ ರೀಟಾ, ಯೂಜಿನ್ ಟೀಚರ್, ಮ್ಯಾಗ್ಡಲೀನ್ ಟೀಚರ್, ಸುಲೋಚನ ಟೀಚರ್, ಸೀತಮ್ಮ ಟೀಚರ್ ಅವರನ್ನೊಳಗೊಂಡ ಸಮರ್ಥ ಶಿಕ್ಷಕ-ಶಿಕ್ಷಕಿಯರ ತಂಡ ಪ್ರಾಥಮಿಕ ಶಾಲೆಯಲ್ಲಿ ನಮ್ಮ ಕಲಿಕೆಗೆ ಭದ್ರ ತಳಪಾಯ ಹಾಕುವಲ್ಲಿ ಯಶಸ್ವಿಯಾಗಿತ್ತು. ಬಾಲ ಚೇಷ್ಟೆಗಳಿಗೆ ಸರಿಯಾಗಿ ಬೆತ್ತದ ಸವಿಯೂ ಲಭಿಸಿತ್ತು !

ಜೂಲಿಯನ್ ಸಿಸ್ಟರ್ ಅವರ ಇಂಗ್ಲಿಷ್ ಮತ್ತು ಕನ್ನಡದ ಬೋಧನೆ, ಈ ಭಾಷೆಗಳ ಮೇಲೆ ಮಕ್ಕಳು ಹಿಡಿತ ಸಾಧಿಸುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗಿತ್ತು. ಇಬ್ಬರು ಶಿಕ್ಷಕಿಯರು ಗೈರು ಹಾಜರಾದರೇನಂತೆ, ಒಂದೇ ತರಗತಿಯಲ್ಲಿ ಮೂರು ತರಗತಿಯ ವಿದ್ಯಾರ್ಥಿಗಳನ್ನು ನಿಭಾಯಿಸಬಲ್ಲೆ ಎಂದು ಚಾಣಾಕ್ಷತನ ಮೆರೆದ ಆ್ಯನಿ ಟೀಚರ್, ಇವರನ್ನೆಲ್ಲಾ ಮರೆಯಲು ಸಾಧ್ಯವೇ ?

ಸಮೀಪದ ಸರಕಾರಿ ವರ್ಕ್ಶಾಪ್ ನಿಂದ ಮೊಳಗುತ್ತಿದ್ದ ಸೈರನ್ ನಡುವೆ, ಸಹಪಾಠಿಗಳೊಂದಿಗೆ ಕುಂಟಾಬಿಲ್ಲೆ, ಸೂರ್ತಿ, ಗೋಲಿ, ಲಗೋರಿ, ಬುಗುರಿ, ಮರಕೋತಿ ಆಟದ ಮಜಾ, ಜೊತೆಗೆ ಅಪ್ಪನ ಕೋಟಿನ ಜೇಬಿಂದ ಎಗರಿಸಿದ ಒಂದು ಅಥವಾ ೨ ರೂ. ನಲ್ಲಿ ಗೆಳೆಯರೊಂದಿಗೆ ‘ಕಾಫಿಕೃಪಾ’ ಕಟ್ಟಡದ ಸಮೀಪ ಐಸ್‌ಕ್ಯಾಂಡಿ, ದೂದ್‌ಕ್ಯಾಂಡಿ ಸವಿಯುತ್ತಿದ್ದ ದಿನಗಳವು. ಸಂಜೆಯಾದೊಡನೆ ಗೌಳಿಬೀದಿಯಲ್ಲಿ ಪಾಂಡಿಯನ್ ಬಳಿ ತೆರಳಿದರೆ ಒಂದು ರೂ.ಗೆ ಬೊಗಸೆ ತುಂಬಾ ಕಡಲೆಟಾಫಿ! ಗೆಳೆಯರೊಂದಿಗೆ ಕಳೆದ ಆ ಮಧುರ ಕ್ಷಣಗಳು, ಮರಳಿ ಸಿಗುವಂತಿದ್ದರೆ ಅನ್ನಿಸಿತ್ತು.

ನಂತರ ಪ್ರೌಢಶಾಲೆಯಲ್ಲಿ ಆರಂಭದಲ್ಲಿ ರವೀಂದ್ರದಾಸ್ ನಂತರ ಜಾರ್ಜ್ ವಿಲಿಯಮ್ಸ್ ಮುಖ್ಯೋಪಾಧ್ಯಾಯರು, ನಂಜುAಡ ಮಾಸ್ಟರ್, ಗೋಪಾಲಕೃಷ್ಣ ಹೆಬ್ಬಾರ್ ಸರ್, ಮೀನಾ ಟೀಚರ್, ಪದ್ಮನಾಭ ಸಾಲಿಯಾನ್ ಸರ್, ಶ್ರೀಕಂಠಮೂರ್ತಿ ಮಾಸ್ಟರ್, ಶ್ರೀಧರ್ ಸರ್, ಲೂನಿ ಟೀಚರ್, ಪ್ರಭಾಕರ್ ಮಾಸ್ಟರ್, ಗೋವರ್ಧನ್ ಮಾಸ್ಟರ್, ರಾಜಲಕ್ಷಿö್ಮ ಟೀಚರ್, ಮುತ್ತಣ್ಣ ಮಾಸ್ಟರ್, ಬೋಜಕ್ಕಿ ಟೀಚರ್, ಅನಸೂಯ ಟೀಚರ್, ವಿದ್ಯಾ ಟೀಚರ್...ಇವರೆಲ್ಲರ ಬೋಧನೆಯಿಂದ ಬದುಕು ರೂಪು ತಳೆಯಿತು. ಇವರ ಗರಡಿಯಲ್ಲಿ ಪಳಗಿದ ನನ್ನ ಸಹಪಾಠಿಗಳು ದೇಶ-ವಿದೇಶದಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಶಿಕ್ಷಕರಿಗೆ ಇನ್ನೇನು ತಾನೇ ಬೇಕು ? ಅದರಲ್ಲೂ ನಂಜುAಡ ಮಾಸ್ಟರ್ ಮತ್ತು ಗೋಪಾಲಕೃಷ್ಣ ಹೆಬ್ಬಾರ್ ಸರ್ ಅವರ ಗಣಿತ ಮತ್ತು ವಿಜ್ಞಾನದ ಬೋಧನೆ ಸಮಕಾಲೀನ ವಿದ್ಯಾರ್ಥಿಗಳ ಮನಸ್ಸಿ ನಿಂದ ಎಂದಿಗೂ ಮರೆಯಾಗದು. ಜೀವನದಲ್ಲಿ ಶಿಸ್ತು ಕಲಿಸಿದ್ದು ನಂಜುAಡ ಮಾಸ್ಟರ್, ಅವರೊಂದಿಗೆ ಭಯಮಿಶ್ರಿತ ಸಲುಗೆ ನಮ್ಮದು, ಸೋಮವಾರ, ಮಂಗಳವಾರ ಸಂಜೆ ಅವರ ಮಾರ್ಗದರ್ಶನದಲ್ಲಿ ಎನ್.ಸಿ.ಸಿ. ಕವಾಯತು, ಕವಾಯತು ಮುಗಿಯುತ್ತಿದ್ದಂತೆ ಸಮೀಪದ ಆನಂದ ಬೇಕರಿಯಿಂದ ‘ಸ್ಟೀಟ್-ಬಾರಾ’ ಪ್ಯಾಕೆಟ್ ಬರುತ್ತಿತ್ತು., ಇವೆಲ್ಲದರ ನಡುವೆ ರಾಜಲಕ್ಷಿö್ಮ ಟೀಚರ್ ಅವರ ‘ವರ್ಕ್ ಎಕ್ಸ್ಪೀಯರೆನ್ಸ್ ತರಗತಿ, ಆಗಲೇ ನಮ್ಮನ್ನು ಕರಕುಶಲತೆಯೆಡೆಗೆ ಸೆಳೆದಿತ್ತು. ಬುಟ್ಟಿ, ಬ್ಯಾಗ್, ಚಾಪೆ ಹಣೆಯುವುದು, ಗೊಂಬೆಗೆ ಶೃಂಗಾರ, ಜರಿಗಾಮಿ...ಅವರು ಕಲಿಸಿದ್ದು ಒಂದೇ ಎರಡೇ ?!

‘ನನ್ನನ್ನು ಕಪ್ಪಗಿದ್ದೇನೆ ಎಂದು ರೇಗಿಸಬೇಡ್ರೋ, ಬಿಳಿಯಾಗಿರುವ ಸುಂದರ ಯುವತಿಯನ್ನೇ ಮದುವೆಯಾಗುತ್ತೇನೆ ನೋಡ್ರೋ’ ಎಂದು ಹಿಂದಿ ಶಿಕ್ಷಕ ಗೋವರ್ಧನ್ ಮಾಸ್ಟರ್ ಹೇಳುತ್ತಿದ್ದಾಗಲೆಲ್ಲಾ ಮುಸಿ ಮುಸಿ ನಗುತ್ತಿದ್ದೆವು. ಇವೆಲ್ಲದರ ನಡುವೆ ನಾನು ‘ಬಾವಾ, ನೀಡ ತಂಗೆನ ನಾಕ್ ತಪ್ಪಿಯಾ ? ಎಂದು ಸಹಪಾಠಿಯೊಬ್ಬನನ್ನು ಕಿಚಾಯಿಸಿದ್ದೆ, ಎಲ್ಲೆಡೆ ಹಿತಶತ್ರುಗಳಿರುವಂತೆ ನನ್ನ ಇನ್ನೊಬ್ಬ ಸಹಪಾಠಿ ಇದನ್ನು ನಂಜುAಡ ಮಾಸ್ಟರ್‌ಗೆ ಚಾಡಿ ಒಪ್ಪಿಸಿದ್ದ ! ೫೦ ಬಸ್ಕಿ ತೆಗೆಯುವ ಶಿಕ್ಷೆಯೂ ನನಗೆ ಲಭಿಸಿತ್ತು.

ರಜೆ ಬಂತೆAದರೆ ಗೆಳಯರೊಂದಿಗೆ ಗಾಂಧಿಮೈದಾನದ ಒತ್ತಿನಲ್ಲಿರುವ ಬೆಟ್ಟದ ಮೂಲಕ ನೆಹರೂ ಪಾರ್ಕ್, ರಾಜಾಸೀಟ್, ಸ್ಟೋನ್‌ಹಿಲ್‌ನೆಡೆಗೆ ನಡಿಗೆ. ಕಾಡು-ಮೇಡು ಅಲೆದಾಟ, ಕೊಟ್ಟೆಹಣ್ಣು, ಅಮ್ಮೆಹಣ್ಣು, ನೇರಳೆ, ಜಮುನಾರಿ ಹಣ್ಣು ಬೇಟೆ...ಹೀಗೆ ಒಂದೇ ಎರಡೇ ? ನೆನಪಿಸಿಕೊಂಡಷ್ಟೂ ಸಾಲದು. ಇವೆಲ್ಲದರ ನಡುವೆ ಶಾಲೆಯ ಸಹಾಯಕ ಸಿಬ್ಬಂದಿಗಳಾದ ಲೂಯಿಸ್ ನರೋನ್ಹಾ, ಮಾರ್ಷಲ್, ಡೇನಿಯಲ್, ಆಶೀರ್ವಾದ್, ಪುಟ್ಟತಾಯಿ ಇವರ ಸೌಜನ್ಯದ ವರ್ತನೆ ಮರೆಯಲಾದೀತೆ ? ‘ಸವಿನೆನಪುಗಳು ಬೇಕು ಸವಿಯಲೇ ಬದುಕು’ ಅಲ್ಲವೇ ?

-ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ,

ಮಡಿಕೇರಿ, ಮೊ:೯೮೪೫೪೯೯೧೧೨