ಮೂರ್ನಾಡು, ಡಿ. ೯: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ ವರ್ಣರಂಜಿತವಾಗಿ ನಡೆಯಿತು. ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಮತ್ತು ಕ್ರೀಡಾ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕ್ರೀಡಾಪಟುಗಳು ಕ್ರೀಡಾ ಪ್ರಮಾಣವಚನವನ್ನು ಸ್ವೀಕರಿಸಿದರು.
ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನವೂ ನಡೆದಿದ್ದು ವಿಶೇಷವಾಗಿತ್ತು. ವಿವಿಧ ವಿಭಾಗದ ದೈಹಿಕ ಉಪನ್ಯಾಸಕರು ವಾರ್ಷಿಕ ಕ್ರೀಡಾವರದಿಯನ್ನು ವಾಚಿಸಿದರು. ಕ್ರೀಡಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಈ ವರ್ಷ ತಾಲೂಕು, ಜಿಲ್ಲೆ, ವಿಶ್ವವಿದ್ಯಾನಿಲಯ ಹೀಗೆ ವಿವಿಧ ಮಟ್ಟಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಶ್ಮಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಸಭೆಗೆ ಪರಿಚಯಿಸಿದರು. ಇದೇ ಸಂದರ್ಭ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ೧೦೦ ಮೀಟರ್ ಓಟವನ್ನು ಆಯೋಜಿಸಲಾಗಿತ್ತು.
ಕ್ರೀಡಾ ದಿನದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಬಾರಿಯಂಡ ನರೇನ್ ತಿಮ್ಮಯ್ಯ ಮಾತನಾಡಿ, ಕ್ರೀಡೆಗೆ ರಾಷ್ಟçದಲ್ಲಿ ಇನ್ನಷ್ಟು ಉತ್ತೇಜನ ಅಗತ್ಯ. ಶಿಕ್ಷಣದಲ್ಲಿ ಮುಂದಿದ್ದು ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಗೆಲ್ಲುವುದು ಸೋಲುವುದು ಇದ್ದದ್ದೇ. ಆದರೆ ಕ್ರೀಡೆ ಮನರಂಜನೆಯ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ. ಹೊರ ಜಗತ್ತಿನಲ್ಲಿ ಸ್ಪರ್ಧೆ ತೀವ್ರವಾಗಿದೆ. ಅಲ್ಲಿ ಸ್ಪರ್ಧಿಸಬೇಕಾದರೆ ಸಂಪೂರ್ಣ ವ್ಯಕ್ತಿತ್ವ ಹೊಂದುವುದು ಅಗತ್ಯ. ದೇಶಕ್ಕೆ ಆರೋಗ್ಯವಂತ ಪ್ರಜೆಗಳ ಅಗತ್ಯತೆ ಇದೆ. ಕ್ರೀಡೆ ನಾಯಕತ್ವ ಗುಣವನ್ನೂ ಬೆಳೆಸುತ್ತದೆ. ಆದ್ದರಿಂದ ಇಂದಿನ ಯುವಜನತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಅದು ಈ ಕ್ಷಣದ ಅಗತ್ಯತೆಯೂ ಹೌದು ಎಂದು ನುಡಿದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಅವರು ಮಾತನಾಡಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಉಚಿತವಾಗಿ ಗ್ಯಾಲರಿಯನ್ನು ನಿರ್ಮಿಸಿಕೊಟ್ಟ ಬಾಚೆಟ್ಟಿರ ದಿವಂಗತ ಲಾಲು ಮುದ್ದಯ್ಯ ಅವರನ್ನು ಸ್ಮರಿಸಿಕೊಂಡರು. ವಿದ್ಯಾರ್ಥಿಗಳ ಸಾಧನೆ ಪ್ರಶಂಸನಾರ್ಹ. ಇನ್ನಷ್ಟು ಪ್ರಯತ್ನಮಾಡಿದರೆ ಮತ್ತಷ್ಟು ಸಾಧನೆಗಳನ್ನು ಮಾಡುವುದು ಸಾಧ್ಯ. ಸಂಸ್ಥೆಯ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಗಮನಹರಿಸಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ದಾನಿಗಳಾದ ಬಾಚೆಟ್ಟಿರ ಕಮಲು ಮುದ್ದಯ್ಯ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶP ನಂದೇಟಿರ ರಾಜಾಮಾದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಸಮಸ್ತ ಶಿಕ್ಷಕ, ಶಿಕ್ಷಕೇತರ ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾಸಂಸ್ಥೆಯ ನಿರ್ದೇಶಕರಾದ ಪೆಮ್ಮಡಿಯಂಡ ವೇಣು ಅಪ್ಪಣ್ಣ ಸ್ವಾಗತಿಸಿದರೆ ಪ್ರೌಢಶಾಲಾ ಶಿಕ್ಷಕ ಪ್ರಶಾಂತ್ ಎಸ್.ಡಿ ವಂದಿಸಿದರು. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ರೀರಕ್ಷಾ ಹಾಗೂ ಶಿಕ್ಷಕಿ ಯಾಮಿನಿ ನಿರೂಪಿಸಿದರು.