*ಗೋಣಿಕೊಪ್ಪ, ಡಿ. ೧೦: ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳಸುವಲ್ಲಿ ಪೋಷಕರು ತಮ್ಮ ಕರ್ತವ್ಯವನ್ನು ಮರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಉಪಾಧ್ಯಕ್ಷ ಡಾ. ಕೆ.ಕೆ. ಶಿವಪ್ಪ ಅಭಿಪ್ರಾಯಪಟ್ಟರು.

ಗೋಣಿಕೊಪ್ಪ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಭಾರತೀಯ ಸಾಹಿತ್ಯ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರಹಗಾರರು ಹೆಚ್ಚಾಗುತ್ತಿದರೂ, ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಮಕ್ಕಳಲ್ಲಿ ಓದಿನ ಅಭಿರುಚಿ ಇಲ್ಲದೇ ಇರುವುದು ಇದಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಇರುವ ಮೊಬೈಲ್ ಗೀಳನ್ನು ಕಡಿಮೆ ಮಾಡಲು ಪುಸ್ತಕಗಳ ಬಗ್ಗೆ ಆಸಕ್ತಿ ಬೆಳೆಸಬೇಕೆಂದು ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ಆನಂದ್ ಕರ್ಲಾ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಕೆ.ಆರ್. ವಿನೋದ್ ಸಾಹಿತ್ಯ ಪರಂಪರೆಯ ಬಗ್ಗೆ ಮಾತನಾಡಿದರು. ಕವಿ ಜಗದೀಶ್ ಜೋಡುಬೀಟಿ ನನಗೂ ಒಬ್ಬಳು ಮಗಳಿರಬೇಕಿತ್ತು ಎಂಬ ಕಾವ್ಯವಾಚನ ಮಾಡಿದರು.

ಇದೇ ಸಂದರ್ಭ ಡಾ. ಆನಂತ್‌ಕರ್ಲ ಅವರ ಚುಟುಕು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಅರುವತ್ತೊಕ್ಲು ಸರ್ವದೈವತಾ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಮನೆಯಪಂಡ ಶೀಲಾ ಬೋಪಣ್ಣ, ಪ್ರಮುಖರಾದ ನಾರಾಯಣ ಸ್ವಾಮಿ ನಾಯ್ಡು ಇದ್ದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ ನಡೆಯಿತು.