ಸೋಮವಾರಪೇಟೆ, ಡಿ. ೯: ಹವಾಮಾನ ವೈಪರೀತ್ಯದಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಪಕ್ಷದ ವತಿಯಿಂದ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್. ಸುರೇಶ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬೆಳಗಾವಿ ಅಧಿವೇಶನದಲ್ಲಿ ಕಾಫಿ ಬೆಳೆಗಾರರ ೧೦ ಎಚ್.ಪಿ. ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗು ವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದರು. ಆದರೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

ಈಗ ಬಾಕಿದಾರರಿಗೆ ಸೆಸ್ಕ್ ನೋಟೀಸು ನೀಡುತ್ತಿದೆ. ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ. ವಿದ್ಯುತ್ ಪಂಪ್‌ಸೆಟ್‌ಗಳಿಗೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ರೈತರಿಗೆ ಲಭ್ಯವಾಗದ ದಾಖಲಾತಿಗಳನ್ನು ನೀಡುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ. ರೈತರು ಯಾವ ದಾಖಲೆಯನ್ನು ನೀಡುವುದಿಲ್ಲ. ೫ ಎಕರೆ ಒಳಪಟ್ಟ ಸಣ್ಣ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಸರ್ಕಾರವಿದ್ದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎರಡು ಬಾರಿ ರೈತರ ಸಾಲಮನ್ನಾ ಮಾಡಿದ್ದರು. ಬಿಜೆಪಿ ಸರ್ಕಾರ ಸಾಲಮನ್ನಾ ಮಾಡುವುದು ಹೋಗಲಿ, ತೆರಿಗೆ ನೆಪದಲ್ಲಿ ರೈತರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ದೋಚುತ್ತಿದೆ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ ಅವರಿಂದಾಗಿ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಕಬ್ಬು, ಹೊಗೆಸೊಪ್ಪು ಬೆಳೆಗಾರರು ಉಚಿತ ವಿದ್ಯುತ್ ಪಡೆದುಕೊಂಡಿದ್ದಾರೆ. ಕಾಫಿ ಬೆಳೆಯುವ ಮಲೆನಾಡು ಜಿಲ್ಲೆಗಳ ಶಾಸಕರು, ಸಂಸದರು ಈ ಭಾಗದ ಕೃಷಿಕರ ಹಿತವನ್ನು ಕಾಪಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕಾಲಿಕ ಮಳೆ, ಅತಿವೃಷ್ಟಿಯಿಂದ ಕಳೆದ ಒಂದು ದಶಕದಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ರೈತರು ಸಾಲಗಾರರಾಗಿದ್ದಾರೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿ ನಿರ್ವಹಣೆಯಿಲ್ಲದೆ ಕಾಫಿ ತೋಟಗಳು ರೋಗ ಪೀಡಿತವಾಗಿವೆ. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು, ರೈತರ ಪಂಪ್‌ಸೆಟ್‌ಗಳ ಬಾಕಿಯಿರುವ ವಿದ್ಯುತ್‌ಬಿಲ್ ಮನ್ನಾ ಮಾಡಬೇಕು. ಉಚಿತ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪಿ.ಕೆ.ವಿಜೇಶ್, ಜೆ.ಕೆ.ರೇವಪ್ಪ ಇದ್ದರು.