ಸಿದ್ದಾಪುರ, ಡಿ. ೧೦ : ಕಾಫಿ ತೋಟದ ಲೈನ್‌ಮನೆಗಳಲ್ಲಿ ವಾಸವಾಗಿರುವ ಆದಿವಾಸಿಗಳು ಶಾಶ್ವತ ನಿವೇಶನಕ್ಕೆ ಆಗ್ರಹಿಸಿ ಕೈಗೊಂಡಿರುವ ಅಹೋರಾತ್ರಿ ಹೋರಾಟ ನೂರು ದಿನ ದಾಟಿದೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಅಮ್ಮತ್ತಿ, ಹೊಸೂರು, ಆತೂರು, ಬಿರುನಾಣಿ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಸೇರಿದಂತೆ ವಿವಿಧ ಗ್ರಾಮದ ಸುಮಾರು ೩೦೦ ಕುಟುಂಬದ ಆದಿವಾಸಿಗಳು ಕಳೆದ ೧೧೭ ದಿನಗಳಿಂದ ಪೊನ್ನಂಪೇಟೆಯಲ್ಲಿರುವ ವೀರಾಜಪೇಟೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯ ಮುಂಭಾಗ ಗುಡಿಸಲು ನಿರ್ಮಿಸಿ, ನಿವೇಶನಕ್ಕಾಗಿ ಹೋರಾಟ ನಡೆಸುತ್ತಿದ್ದರೂ, ಆಡಳಿತ ವರ್ಗದಿಂದ ಯಾವುದೇ ಸ್ಪಂದನ ಸಿಕ್ಕಿಲ್ಲ ಎಂದು ಆದಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ಬುಡಕಟ್ಟು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೇರಿರುವ ನೂರಾರು ಮಂದಿ ಸ್ಥಳದಲ್ಲೇ ಆಹಾರ ತಯಾರಿಸಿಕೊಂಡು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಶಾಶ್ವತ ಸೂರು ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮಾಯಮುಡಿಯಲ್ಲಿ ೧೩೦ ದಿನ ಪೂರೈಸಿದ ಹೋರಾಟ!
ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಆದಿವಾಸಿಗಳು ಗ್ರಾ.ಪಂ ಮುಂಭಾಗ ನಡೆಸುತ್ತಿರುವ ಹೋರಾಟ ೧೩೦ ದಿನಗಳನ್ನು ಪೂರೈಸಿದೆ. ರುದ್ರಬೀಡು ಕಂದಾಯ ಗ್ರಾಮದಲ್ಲಿ ೪ ಏಕರೆ ಜಾಗವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿನಲ್ಲಿ ಕಾಯ್ದಿರಿಸಿದೆ. ೨೦೧೧-೧೨ ರಲ್ಲಿ ಜಿಲ್ಲಾಧಿಕಾರಿ ಅವರ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಉಪಯೋಗಕ್ಕಾಗಿ ಕಾಯ್ದಿರಿಸಿರುವ ಜಾಗದಲ್ಲಿ ನಿವೇಶನಕ್ಕೆ ಜಾಗ ನೀಡಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿ ತಿಂಗಳು ಕಳೆದರೂ, ಈವರೆಗೂ ಸಮೀಕ್ಷೆಯಾಗಿಲ್ಲ. ನೆಪವನ್ನು ಹೇಳಿಕೊಂಡು ದಿನ ದೂಡುತ್ತಿದ್ದಾರೆ ಎಂದು ಹೋರಾಟ ಸಮಿತಿ ಸಂಚಾಲಕರಾದ ಜ್ಯೋತಿ ದೂರಿದರು. ಅದೇ ವ್ಯಾಪ್ತಿಯಲ್ಲಿ ೨೨ ಏಕರೆ ಸರ್ಕಾರಿ ಜಾಗವಿದ್ದು, ನಿವೇಶನ ರಹಿತರಿಗೆ ಹಂಚಬೇಕೆAದು ಅವರು ಒತ್ತಾಯಿಸಿದರು.
ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ
ಈ ಕುರಿತು ಪ್ರತಿಕ್ರಿಯಿಸಿದ ವೀರಾಜಪೇಟೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ ನಿವೇಶನ ರಹಿತರ ಪಟ್ಟಿಯನ್ನು ತಯಾರಿಸಲಾಗಿದ್ದು, ಸರ್ಕಾರಿ ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಆ ನಂತರ ಜಾಗವನ್ನು ನಿವೇಶನಕ್ಕಾಗಿ ಕಾಯ್ದಿರಿಸಿದ ಬಳಿಕವಷ್ಟೇ ನಿವೇಶನ ರಹಿತರಿಗೆ ಹಂಚಲು ಸಾಧ್ಯ. ಸರ್ಕಾರಿ ಜಾಗವನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದು, ನಿವೇಶನ ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಯವರು ನೀಡಿದ್ದಾರೆ. ಶಾಶ್ವತ ನಿವೇಶನ ಸಿಗುವವರೆಗೂ ಹೋರಾಟವನ್ನು ಮುಂದುವರೆಸ ಲಾಗುವುದೆಂದು ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷರಾದ ವೈ.ಬಿ ಗಪ್ಪೂ ತಿಳಿಸಿದ್ದಾರೆ.
ಕಳೆದ ೧೧೭ ದಿನಗಳಿಂದ ಮಳೆಯನ್ನು ಲೆಕ್ಕಿಸದೇ ಸ್ವಂತ ಸೂರಿಗಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ಮಾಡಲಾಗುವುದೆಂದು ಲೈನ್‌ಮನೆಯಲ್ಲಿ ವಾಸವಿರುವ ಆನಂದಪುರದ ನಿವಾಸಿ ಭವ್ಯ ತಿಳಿಸಿದ್ದಾರೆ.
- ಎ.ಎನ್. ವಾಸು