ಸೇವಾ ಕಾರ್ಯಗಳಿಗೆ ಬಳಸುವ ಹೆಸರು ಬದಲಾವಣೆಗೆ ನಿರ್ಧಾರ: ಶಶಿಕಲಾ ಜೊಲ್ಲೆ
ಬೆಂಗಳೂರು, ಡಿ. ೧೦: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ರೂಢಿಯಾಗಿ ಬಂದಿರುವ ‘ದೀವಟಿಗೆ ಸಲಾಂ’ ‘ಸಲಾಂ ಆರತಿ’ ಮತ್ತು ‘ಸಲಾಂ ಮಂಗಳಾರತಿ’ ಪೂಜಾಕಾರ್ಯಗಳ ಹೆಸರನ್ನು ಬದಲಾಯಿಸಿ ನಮ್ಮ ಸಂಪ್ರದಾಯದ ಹೆಸರನ್ನು ನೀಡುವ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ಪೂಜಾ ಕಾರ್ಯಗಳ ಹೆಸರನ್ನು ಸ್ಥಳೀಯ ಭಾಷೆಯ ಪದಗಳಿಗೆ ಬದಲಿಸುವ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಕೆಲವು ದೇವಾಲಯಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಸಂಧರ್ಭಗಳಲ್ಲಿ ದೀವಟಿಗೆ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿಯಂತೆ ನಡೆಸುವ ಕಾರ್ಯಕ್ಕೆ ದೀವಟಿಗೆ ಸಲಾಂ, ಸಲಾಂ ಮಂಗಳಾರತಿ ಮತ್ತು ಸಲಾಂ ಆರತಿ ಎಂದು ಕೆಲವು ದೇವಾಲಯಗಳಲ್ಲಿ ಕರೆಯಲಾಗುತ್ತಿದೆ. ಇದನ್ನ ಬದಲಾಯಿಸಬೇಕು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಕ್ತಾದಿಗಳಿಂದ ಸಾಕಷ್ಟು ಒತ್ತಾಯ ಇರುವ ಬಗ್ಗೆ, ಧಾರ್ಮಿಕ ಪರಿಷತ್ತಿನ ಸದಸ್ಯರು ಸಭೆಯ ಗಮನಕ್ಕೆ ತಂದರು. ಇದರ ಹಿನ್ನಲೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವಿಸ್ತ್ರುತ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ ನೂತನ ಸಿಎಂ ಆಗಿ ಸುಖ್ವಿಂದರ್ ಸಿಂಗ್ ಇಂದು ಅಧಿಕಾರ ಸ್ವೀಕಾರ
ಶಿಮ್ಲಾ, ಡಿ. ೧೦: ಹಿಮಾಚಲ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಸುಖು ಅವರು ಹಿಮಾಚಲ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಗ್ನಿಹೋತ್ರಿ ಅವರು ತಾ. ೧೧ ರಂದು (ಇಂದು) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಖ್ವಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಗ್ನಿಹೋತ್ರಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಇಂದು ಸಂಜೆ ಸುಖು ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಘೋಷಿಸಿದ ನಂತರ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪಕ್ಷದ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿರ್ಣಯವನ್ನು ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದ ಒಂದು ದಿನದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಸುಖ್ವಿಂದರ್ ಸಿಂಗ್ ಸುಖು ಅವರು ತಾ. ೧೧ ರಂದು ಬೆಳಗ್ಗೆ ೧೧ ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಹರೋಲಿಯಿಂದ ಐದು ಬಾರಿ ಶಾಸಕರಾಗಿರುವ ಪ್ರತಿಪಕ್ಷ ನಾಯಕ ಮುಕೇಶ್ ಅಗ್ನಿಹೋತ್ರಿ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಗೂಂಡಾಗಿರಿ ಮಾಡ್ತಿದ್ದೆ, ಜೈಲಿಗೂ ಹೋಗಿದ್ದೆ: ಸಚಿವ ಶ್ರೀರಾಮುಲು
ಬಳ್ಳಾರಿ, ಡಿ. ೧೦: ನಾನು ನಿಮ್ಮಷ್ಟು ಬುದ್ಧಿವಂತ ಅಲ್ಲ. ಲಾಸ್ಟ್ ಬೆಂಚ್ ವಿದ್ಯಾರ್ಥಿ. ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಎಚ್ಡಿ ಮಾಡಿದ್ದೇನೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ತಮ್ಮ ಕಾಲೇಜ್ ದಿನಗಳನ್ನು ಶನಿವಾರ ಮೆಲುಕು ಹಾಕಿದ್ದಾರೆ. ವೀರಶೈವ ವಿದ್ಯಾವರ್ಧಕ ಸಂಘದ ಎಸ್ಜಿ ಕಾಲೇಜಿನ ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ಮೊದಲು ನಾನೂ ಗೂಂಡಾಗಿರಿ ಮಾಡುತ್ತಿದ್ದೆ. ತುಂಬಾ ಜಗಳ ಮಾಡುತ್ತಿದ್ದೆ. ಬಡವರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಗೂಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದೆ. ಬಡವರ ಪರವಾಗಿ ನಿಂತು ಜಗಳವಾಡಿ ೧೪-೧೫ ಬಾರಿ ಜೈಲಿಗೂ ಹೋಗಿದ್ದೆ ಎಂದು ಹೇಳಿದ್ದಾರೆ. ಕಾಲೇಜಿಗೆ ನಾನು ಜೀನ್ಸ್ಪ್ಯಾಂಟ್ ಹಾಕಿಕೊಂಡು ಹೋದ್ರೆ ಹುಡುಗೀರೆಲ್ಲಾ ನನ್ನನ್ನೇ ನೋಡುತ್ತಿದ್ದರು. ನನಗೆ ಓದು ತಲೆಗೆ ಹತ್ತಲಿಲ್ಲ, ಆದರೆ ಸಂಸ್ಕಾರ ಮಾತ್ರ ಬಿಡಲಿಲ್ಲ. ನಾನು ಬಾರಿ ಬುದ್ಧಿವಂತನಲ್ಲ, ಲಾಸ್ಟ್? ಬೆಂಚ್ ಸ್ಟೂಡೆಂಟ್?. ಶಿಕ್ಷಕರು ಪ್ರೀತಿಯಿಂದ ಬೈಯ್ತಿದ್ದರು. ೫ ಬಾರಿ ಶಾಸಕ, ೪ ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣ ಎಂದರು.
ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರಿಕರಿಸಿ ವಿಕೃತಿ
ಬೆಂಗಳೂರು, ಡಿ. ೧೦: ಸಿಲಿಕಾನ್ ಸಿಟಿಯಲ್ಲಿ ಸೈಕೋಪಾತ್ ಮಾದಕವ್ಯಸನಿ ಪತಿಮಹಾಶಯನೊಬ್ಬ ತನ್ನ ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದ ಪ್ರಕರಣ ಬೆಳಕಿಗೆ ಬಂದಿದೆ. ಸೈಕೋ ಪತಿಯನ್ನು ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಎಂದು ಗುರುತಿಸಲಾಗಿದೆ. ಈತನನ್ನು ಮಹಿಳಾ ಟೆಕ್ಕಿಯೊಬ್ಬರು ೨೦೧೧ರ ಏಪ್ರಿಲ್ನಲ್ಲಿ ವಿವಾಹವಾಗಿದ್ದಾರೆ. ೨೦೧೫ ರಿಂದ ತನ್ನ ವಿಕೃತಿ ಶುರು ಮಾಡಿದ್ದ ಆರೋಪಿ ಪತಿ ಜಾನ್ಪಾಲ್, ಮನೆಗೆ ತನ್ನ ಗೆಳೆಯರನ್ನ ಕರೆದು ಪಾರ್ಟಿ ಮಾಡಿ ನಂತರ ಗೆಳೆಯರೊಂದಿಗೆ ಬೆಡ್ ಶೇರ್ ಮಾಡು ಎಂದು ಒತ್ತಾಯಿಸುತ್ತಿದ್ದ. ಪತಿಯ ಹಲ್ಲೆಯಿಂದ ತಾಳಲಾರದೇ ಆತನ ಗೆಳೆಯರೊಂದಿಗೆ ಮಹಿಳಾ ಟೆಕ್ಕಿ ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ಸೂಚಿಸುತ್ತಿದ್ದರು. ತನ್ನ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿದ ಜಾನ್ ಪಾಲ್ ದೈಹಿಕ ಸಂಪರ್ಕದ ಪೊಟೋ ಹಾಗೂ ವೀಡಿಯೋ ಚಿತ್ರೀಕರಣ ಮಾಡಿದ್ದಾನೆ. ಇಷ್ಟಕ್ಕೂ ಸುಮ್ಮನಾಗದ ಆತ ಮತ್ತೊಂದು ಕೆಟ್ಟ ಹೆಜ್ಜೆ ಮುಂದಿಟ್ಟು ಪತ್ನಿಯ ತಂಗಿಯನ್ನು ತನ್ನೊಡನೆ ಮಲಗುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಗಂಡನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಪತ್ನಿ ಪತಿಗೆ ವಿಚ್ಚೇಧನ ನೀಡಲು ಮುಂದಾಗಿದ್ದಾರೆ. ಈ ವೇಳೆ ಪತ್ನಿ ತನ್ನ ಗೆಳೆಯರೊಂದಿಗಿನ ಅಶ್ಲೀಲ ಪೊಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಗಂಡನ ಕಾಟ, ಕಿರುಕುಳ ತಾಳಲಾಗದೆ ಗಟ್ಟಿ ಮನಸ್ಸು ಮಾಡಿ ಪತಿಯ ವಿರುದ್ಧ ಪತ್ನಿ ಠಾಣೆ ಮೆಟ್ಟಿಲೇರಿ ಪತಿಯ ಹೇಯ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೆ ಆತನೊಬ್ಬ ಗಾಂಜಾ ವ್ಯಸನಿಯಾಗಿದ್ದು, ಮನೆಯಲ್ಲಿಯೇ ಗಾಂಜಾ ಸಸಿಗಳನ್ನ ಬೆಳೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ದೂರಿನ ಅನ್ವಯ ಸಂಪಿಗೆಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ
ಚಿತ್ತಗಾಂಗ್, ಡಿ. ೧೦: ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ತಂಡ ೨೨೭ ರನ್ಗಳಿಂದ ಮಣಿಸಿದ್ದು, ೩ ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ ೨-೧ ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಭಾರತ ನೀಡಿದ ೪೧೦ ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ ೩೪ ಓವರ್ ಗಳಲ್ಲಿ ೧೮೨ ರನ್ಗಳಿಗೆ ಆಲೌಟ್ ಆಯಿತು. ಆ ಮೂಲಕ ೨೨೭ ರನ್ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಜಯದ ಹೊರತಾಗಿಯೂ ೩ ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ೨-೧ ಅಂತರದಲ್ಲಿ ಸರಣಿ ಸೋಲು ಕಂಡಿದೆ. ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ ೫೦ ಓವರ್ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೪೦೯ ರನ್ ಗಳಿಸಿತ್ತು. ಇಶಾನ್ ಕಿಶನ್ ಅವರು ದ್ವಿಶತಕ (೨೧೦) ಸಿಡಿಸಿದರೆ, ಕೊಹ್ಲಿ ಶತಕ (೧೧೩) ಗಳಿಸಿದರು. ಬೃಹತ್ ಗುರಿ ಬೆನ್ನು ಹತ್ತಿದ ಬಾಂಗ್ಲಾ ಪಡೆ ೩೪ ಓವರ್ಗಳಲ್ಲಿ ೧೮೨ರನ್ಗಳಿಗೆ ಸರ್ವ ಪತನ ಕಂಡಿತು. ಬಾಂಗ್ಲಾಪರ ಶಕೀಬ್ ಅಲ್ ಹಸನ್ ೪೩ ರನ್ ಗಳಿಸಿದರೆ, ನಾಯಕ ಲಿಟನ್ ದಾಸ್ ೨೯ರನ್, ಯಾಸಿರ್ ಅಲಿ ೨೫ ಮತ್ತು ಮಹಮದುಲ್ಲಾ ೨೦ ರನ್ ಗಳಿಸಿದರು.