ಮಡಿಕೇರಿ, ಡಿ. ೮: ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆ ನಗರ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ, ಜಯಘೋಷ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮಾತನಾಡಿ, ಸಂಚಲನ ಸೃಷ್ಟಿಸಿದ್ದ ಚುನಾವಣೆಯಲ್ಲಿ ಬಿಜೆಪಿ ಸತತ ೭ನೇ ಬಾರಿಗೆ ಅಭೂತಪೂರ್ವ ಜಯ ಸಾಧಿಸಿದೆ. ೧೫೭ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಪಕ್ಷದ ಸಂಘಟನೆ ಶಕ್ತಿಯನ್ನು ಪ್ರದರ್ಶಿಸಿದೆ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿ ಅಧಿಕಾರ ಸ್ಥಾಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸದೃಢ ಭಾರತ ನಿರ್ಮಾಣಕ್ಕೆ ಬಿಜೆಪಿ ಸರಕಾರದ ಅವಶ್ಯಕತೆ ಇದೆ ಎಂದರು.
ಈ ಸಂದರ್ಭ ನಗರ ಪ್ರಧಾನ ಕಾರ್ಯದರ್ಶಿ ಕಾಳಚಂಡ ಅಪ್ಪಣ್ಣ, ಉಪಾಧ್ಯಕ್ಷ ಬಿ.ಕೆ.ಜಗದೀಶ್, ಹಿಂದುಳಿದ ವರ್ಗಗಳ ಮೋರ್ಚದ ನಗರಾಧ್ಯಕ್ಷ ರಾಜೇಶ್, ಮುಖಂಡರಾದ ಜೀವನ್, ನಂದ, ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಪೂಣಚ್ಚ, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರುಗಳಾದ ಚಂದ್ರಶೇಖರ್ ಕಲಾವತಿ, ಸಬಿತಾ, ಶ್ವೇತಾ ಸೇರಿದಂತೆ ಇನ್ನಿತರರು ಹಾಜರಿದ್ದರು.