ನಾಪೋಕ್ಲು, ಡಿ. ೮: ಕೊಡಗಿನ ಅತೀ ಎತ್ತರದ ಬೆಟ್ಟ, ಚಾರಣಿ ಗರ ಸ್ವರ್ಗ ವಾಗಿರುವ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ತಡಿಯಂಡ ಮೋಳ್ ಬೆಟ್ಟ ಪ್ರವೇಶಿಸಲು ಅರಣ್ಯ ಇಲಾಖೆ ದುಬಾರಿ ಶುಲ್ಕ ವಿಧಿಸಿರುವುದರ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಪರ ‘ಶಕ್ತಿ’ಗೆ ಈ ಬಗ್ಗೆ ಹೇಳಿಕೆ ನೀಡಿದ ಮಡಿಕೇರಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಈ ಹಿಂದೆ ಸಾರ್ವಜನಿಕರಿಗೆ ೧೦೦ ರೂ. ಶುಲ್ಕ ವಿಧಿಸಲಾಗಿತ್ತು. ಆದರೆ, ಈಗ ಏಕಾಏಕಿ ಮಕ್ಕಳಿಗೆ ೧೫೦ ರೂ., ಸ್ವದೇಶಿಯರಿಗೆ ೨೫೦ ರೂ. ಹಾಗೂ ವಿದೇಶಿ ಪ್ರವಾಸಿಗರಿಗೆ ೧,೦೦೦ ರೂ.ಗಳ ಶುಲ್ಕ ವಿಧಿಸಲಾಗಿದೆ. ಜಿಲ್ಲೆಯ ಬಹುತೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಯುವಕರು ಅಲ್ಲದೆ ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಚಾರಣಕ್ಕೆ ಜನ ಆಗಮಿಸುತ್ತಾರೆ. ಆದರೆ, ಪ್ರವೇಶ ಶುಲ್ಕದ ದರವನ್ನು ಕಡಿಮೆಗೊಳಿಸಿ ಚಾರಣಿಗರಿಗೆ, ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕಾಗಿದ್ದ ಅರಣ್ಯ ಇಲಾಖೆ ಈಗ ದುಬಾರಿ ಶುಲ್ಕ ವಿಧಿಸುವುದರ ಮೂಲಕ ಪ್ರವಾಸಿಗರಿಗೆ ಹೆಚ್ಚಿನ ಸಮಸ್ಯೆಯನ್ನು ಉಂಟುಮಾಡಿದೆ. ಆದುದರಿಂದ ಅರಣ್ಯ ಇಲಾಖೆ ಕೂಡಲೇ ದುಬಾರಿ ಶುಲ್ಕವನ್ನು ಕಡಿಮೆಗೊಳಿಸದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

-ಪಿ.ವಿ.ಪ್ರಭಾಕರ್