ಕುಶಾಲನಗರ ಸುತ್ತಮುತ್ತ ಹುತ್ತರಿ ಹಬ್ಬ ಅಂಗವಾಗಿ ಹಲವೆಡೆ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಿದವು.

ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಗೌಡ ಯುವಕ ಸಂಘ, ಮಹಿಳಾ ಸ್ವ ಸಹಾಯ ಸಂಘ, ಪದ್ಮಾವತಿ ಮಹಿಳಾ ಒಕ್ಕೂಟ, ಅರೆಭಾಷೆ ಯುವಕ ಸಂಘ, ಗೌಡ ಮಾಜಿ ಸೈನಿಕರ ಸಂಘ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಸಂಜೆ ಗೌಡ ಸಮಾಜದಲ್ಲಿ ೭.೫೦ಕ್ಕೆ ಸಮಾಜದಲ್ಲಿ ನೆರೆ ಕಟ್ಟಿ ನಂತರ ಸಮಾಜದಿಂದ ಒಡ್ಡೋಲಗ ಸಹಿತ ಕುಶಾಲನಗರ ಗಣಪತಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸಲಾಯಿತು.

ಪೂಜೆ ಸಲ್ಲಿಸಿದ ನಂತರ ಗುಮ್ಮನಕೊಲ್ಲಿಯ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘದ ಗದ್ದೆಯಲ್ಲಿ ರಾತ್ರಿ ೮.೫೦ ಕ್ಕೆ ಕದಿರು ಕೊಯ್ದು ಸಮಾಜ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಸ್ಥಳದಲ್ಲಿ ಕದಿರು ಹಂಚಲಾಯಿತು. ಕುಲ್ಲಚೆಟ್ಟಿ ಕಾಶಿ ಪೂವಯ್ಯ ಅವರ ಪಟ್ಟೆದಾರಿಕೆಯಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ಉಪಾಧ್ಯಕ್ಷ ಸೆಟ್ಟೆಜನ ದೊರೆ ಗಣಪತಿ, ಕಾರ್ಯದರ್ಶಿ ಹಾಲುಗುಂಜ ಕೃಷ್ಣ ಮೂರ್ತಿ, ಖಜಾಂಚಿ ಬಳ್ಳಡ್ಕ ವಿಜಯ್ ಕುಮಾರ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕಾರ್ಯದರ್ಶಿ ಕುಲ್ಲಚನ ಹೇಮಂತ್, ಖಜಾಂಚಿ ಕಡವಡಿರ ವಿವೇಕ್, ಗೌಡ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಕುಲ್ಲಚನ ಭಾಗಿರಥಿ, ಪದ್ಮಾವತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಚ್ಚಂಡೀರ ಲತ ಧರ್ಮಕುಮಾರ್, ಮಾಜಿ ಅಧ್ಯಕ್ಷ ಕೂರನ ಪ್ರಕಾಶ್, ಪ್ರಮುಖರಾದ ಕರಂದ್ಲಾಜೆ ಆನಂದ್, ಪೊನ್ನಚನ ಮೋಹನ್, ಸುಳ್ಯಕೋಡಿ ಮಾದಪ್ಪ ಮತ್ತಿತರರು ಇದ್ದರು.