ಗೋಣಿಕೊಪ್ಪಲು, ಡಿ.೬ : ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಾವೇದ್ ಅಕ್ತರ್ ಅವರನ್ನು (ರಾಜ್ಯ ಅರಣ್ಯ ಅಡಿಷನಲ್ ಚೀಫ್ ಸೆಕ್ರೆಟರಿ (ಐಎಎಸ್) ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ರಾಜ್ಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಮಗ್ರವಾದ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ ಮಾನವ ಸಂಘರ್ಷದಿAದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಜಿಲ್ಲೆಯಲ್ಲಿ ಈ ಬಗ್ಗೆ ಇಲಾಖೆಯ ವತಿಯಿಂದ ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡುವಂತೆ ಗಮನ ಸೆಳೆದರು. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಪಾಟೀಲ್, ರಾಜ್ಯ ಕಾರ್ಯದರ್ಶಿ ಗೋಪಾಲ್, ಕೊಡಗು ರೈತ ಸಂಘದ ಮುಖಂಡರಾದ ಕೈಬುಲಿರ ಹರೀಷ್ ಅಪ್ಪಯ್ಯ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ವನ್ಯ ಜೀವಿ, ಮಾನವ ಸಂಘರ್ಷ ಶಾಶ್ವತ ಪರಿಹಾರದ ಬಗ್ಗೆ ಗಮನ ಸೆಳೆದ ಮನು ಸೋಮಯ್ಯ, ನೂತನವಾಗಿ ಸರ್ಕಾರ ರಚಿಸಿರುವ ಟಾಸ್ಕ್ ಪೋರ್ಸ್ ತಂಡದಲ್ಲಿ ಓರ್ವ ಐಎಫ್‌ಎಸ್ ಅಧಿಕಾರಿ ನೇಮಕ ಮಾಡಬೇಕು, ಕಾಫಿ ತೋಟಕ್ಕೆ ಬರುವ ಕಾಡಾನೆಗಳನ್ನು ಕಾಡಿನಲ್ಲಿಯೇ ತಡೆಹಿಡಿಯಬೇಕು, ವಾಚಿಂಗ್ ಟವರ್ ಸೇರಿದಂತೆ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು ಕಾಡಾನೆಗಳ ಸಂಚಾರವನ್ನು ಕಂಡು ಹಿಡಿಯಬೇಕು.

ಟಾಸ್ಕ್ ಫೋರ್ಸ್ ತಂಡ ರೈತರ ಕಾಫಿ ತೋಟಗಳಿಗೆ ಕಾಡಾನೆಗಳು ಬಾರದ ರೀತಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯವನ್ನು ಅಧಿಕಾರಿಗಳ ಮುಂದಿಟ್ಟರು. ಪ್ರಮುಖವಾಗಿ ಅರಣ್ಯದಂಚಿನಲ್ಲಿರುವ ವನ್ಯ ಪ್ರಾಣಿಗಳನ್ನು ತಡೆಯುವ ಮೂಲಕ,ಅವುಗಳು ಗ್ರಾಮಗಳಿಗೆ ಬರದಂತೆ ತಡೆಯಲು ಅತ್ಯಾಧುನಿಕ ತಂತ್ರಜ್ಞಾನ,ಸ್ಯಾಟಲೈಟ್ ಬಳಕೆ ಮಾಡುವುದರ ಬಗ್ಗೆ ಗಮನ ಸೆಳೆದರು. ರೈತ ಸಂಘದ ಪದಾಧಿಕಾರಿಗಳು ನೀಡಿದ ಮನವಿಯ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಹಿರಿಯ ಅಧಿಕಾರಿ ರೈತ ಸಂಘದ ನಿಯೋಗಕ್ಕೆ ಭರವಸೆ ನೀಡಿದರು.