ಶನಿವಾರಸಂತೆ, ಡಿ. ೬: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾರೆ ಗ್ರಾಮದ ಕೃಷಿಕ ಶಿವಕುಮಾರ್ ಎಂಬವರ ಮನೆಗೆ ಸೋಮವಾರಪೇಟೆಯಲ್ಲಿ ಬಂದೂಕು ರಿಪೇರಿ ಮಾಡಿಸಿಕೊಂಡು ಸಂಬAಧಿ ಪೊನ್ನಂಪೇಟೆ ಸಮೀಪದ ಸುಳುಗೋಡು ಗ್ರಾಮದ ಕಾಂಡೇರ ಡಿಂಪು ಕಾರ್ಯಪ್ಪ ಮತ್ತು ಅವರ ಸ್ನೇಹಿತರಾದ ಕಿರುಗೂರು ಗ್ರಾಮದ ಕೆ. ಪೂಣಚ್ಚ, ಮತ್ತೂರು ಗ್ರಾಮದ ಚೀರಂಡ ಅಪ್ಪಣ್ಣ ಬೋಪಯ್ಯ, ಬೆಸಗೂರು ಗ್ರಾಮದ ಬಾಚಮಂಡ ಸೋಮೇಶ್ ಅವರುಗಳು ಬಂದಿದ್ದ ಸಂದರ್ಭ ಆಕಸ್ಮಿಕವಾಗಿ ಗುಂಡು ಸಿಡಿದು ಪೂಣಚ್ಚ ಗಾಯಗೊಂಡ ಘಟನೆ ನಡೆದಿದೆ.
ತೋಟದಲ್ಲಿ ಕಾಫಿ, ಕಾಳು ಮೆಣಸಿನ ಬೆಳೆ ನೋಡಲೆಂದು ತೆರಳಿದ್ದಾಗ ಅಪ್ಪಣ್ಣ ಬೋಪಯ್ಯ ಅವರ ಕೈಯಲ್ಲಿದ್ದ ಬಂದೂಕಿನ ಟ್ರಿಗರ್ಗೆ ಆಕಸ್ಮಿಕವಾಗಿ ಬೆರಳು ತಾಗಿ ಸಿಡಿದ ಗುಂಡು ರಸ್ತೆ ಬದಿಯ ಬಂಡೆಕಲ್ಲಿಗೆ ಬಿದ್ದು ಪಕ್ಕದಲ್ಲಿ ಹೋಗುತ್ತಿದ್ದ ಪೂಣಚ್ಚ ಅವರ ಮೂಗಿಗೆ ಬಡಿದಿದೆ. ತಕ್ಷಣ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃಷಿಕ ಶಿವಕುಮಾರ್ ಸೋಮವಾರ ಶನಿವಾರಸಂತೆ ಪೊಲೀಸ್ ಠಾಣೆಗೆ ಹಾಜರಾಗಿ ಚೀರಂಡ ಅಪ್ಪಣ್ಣ ಬೋಪಯ್ಯ ಅವರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಹೆಡ್ಕಾನ್ಸ್ಟೇಬಲ್ ನಿಶಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.