ಸೋಮವಾರಪೇಟೆ, ಡಿ. ೫: ಜಿಲ್ಲೆಯಲ್ಲಿ ಕಾಫಿ ಬೆಳೆಯುವ ರೈತರು ಬಳಸುವ ೧೦ ಹೆಚ್.ಪಿ.ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಕರ್ನಾಟಕ ರೈತ ಸಂಘದ ಸೋಮವಾರಪೇಟೆ ತಾಲೂಕು ಘಟಕ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಕಳೆದ ಹಲವಾರು ವರ್ಷಗಳಿಂದ ಪ್ರಕೃತಿ ವಿಕೋಪ, ಅಕಾಲಿಕ ಮಳೆಯಿಂದ ಫಸಲು ಹಾನಿಯಾಗುತ್ತಿದ್ದು, ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಸರ್ಕಾರ ಉಚಿತ ವಿದ್ಯುತ್ ಒದಗಿಸದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿಯವರು, ಮಲೆನಾಡು ಭಾಗದ ಶಾಸಕರು ಹಾಗೂ ರೈತ ಸಂಘದ ಬೇಡಿಕೆಗೆ ಸ್ಪಂದಿಸಿ, ಕಾಫಿ ಬೆಳೆಗಾರರ ೧೦ ಎಚ್.ಪಿ. ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಒಪ್ಪಿಗೆ ಸೂಚಿಸಿದ್ದರು. ಆದರೆ ಇದುವರೆಗೆ ಬೇಡಿಕೆ ಈಡೇರಿಲ್ಲ. ಈಗ ಸೆಸ್ಕ್ನವರು ಬಿಲ್ ಪಾವತಿಸದ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲು ನೋಟೀಸ್ ನೀಡುತ್ತಿದ್ದಾರೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹವಾಮಾನ ವೈಪರೀತ್ಯದಿಂದ ನಿಗದಿತ ಸಮಯದಲ್ಲಿ ಹೂಮಳೆ, ಬ್ಯಾಕಿಂಗ್ ಮಳೆ ಬೀಳದೆ ಕಾಫಿ ಫಸಲು ಸಿಗುತ್ತಿಲ್ಲ. ಪ್ರತಿವರ್ಷ ಶೇ.೫೦ರಿಂದ ೭೫ ರಷ್ಟು ಫಸಲು ಹಾನಿಯಾಗುತ್ತಿದೆ. ಸೂಕ್ತ ಪರಿಹಾರ ಸಿಗುತ್ತಿಲ್ಲ. ಕಾಫಿ ತೋಟ ನಿರ್ವಹಣೆಯಿಲ್ಲದೆ ಪಾಳು ಬಿಡುವಂತ ಸಂಕಷ್ಟದ ಸ್ಥಿತಿಯಲ್ಲಿ ರೈತರಿದ್ದಾರೆ. ಪಂಪ್‌ಸೆಟ್‌ಗಳಲ್ಲಿ ನೀರು ಹಾರಿಸಿ ಕೊಂಡು ಹೂ ಅರಳಿಸಲು ಉಚಿತ ವಿದ್ಯುತ್ ಕೇಳುತ್ತಿದ್ದೇವೆ ಎಂದರು.

ಕಾಫಿ ಬೆಳೆಗಾರರು ೨೦೨೦ರಿಂದ ಬಾಕಿಯಿರುವ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಕಟ್ಟಿ ನಂತರ ನಿಮ್ಮ ಖಾತೆಗೆ ವಾಪಾಸ್ಸು ಹಣ ಹಾಕುತ್ತೇವೆ ಎಂದು ಬಾಕಿದಾರರಿಗೆ ಸೆಸ್ಕ್ ನೋಟೀಸ್ ನೀಡುತ್ತಿದೆ. ೧೦ಎಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಬೇಡಿಕೆ ಈಡೇರುವ ನಂಬಿಕೆಯಿAದ ರೈತರು ವಿದ್ಯುತ್ ಬಿಲ್ ಪಾವತಿಸಿಲ್ಲ. ಈಗ ಬಿಲ್‌ಗೆ ಬಡ್ಡಿ, ಚಕ್ರಬಡ್ಡಿ ಇನ್ನಿತರ ತೆರಿಗೆಗಳನ್ನು ಹಾಕಿ, ಬಡ ರೈತರ ವಿದ್ಯುತ್ ಬಿಲ್ ೫೦ ಸಾವಿರ ರೂ.ಗಳಿಂದ ಲಕ್ಷದವರೆಗೆ ಹೋಗಿದೆ. ಈಗ ಬಿಲ್ ಕಟ್ಟಿ ಎಂದು ಸೆಸ್ಕ್ ಸಿಬ್ಬಂದಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ, ಅಂದಿನಿAದಲೇ ಸೆಸ್ಕ್ ಕಚೇರಿ ಎದುರು ರೈತ ಸಂಘದಿAದ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ದಿನೇಶ್ ಎಚ್ಚರಿಸಿದರು. ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಾಲಮನ್ನಾ ಯೋಜನೆಯಲ್ಲಿ ಜಿಲ್ಲೆಯ ೯೨೨ ಮಂದಿ ರೈತರ ಸಾಲಮನ್ನಾ ಆಗಿಲ್ಲ. ಸೋಮವಾರ ಪೇಟೆ ತಾಲೂಕಿನಲ್ಲಿ ೪೬೩ ರೈತರ ಸಾಲಮನ್ನಾ ಆಗಿಲ್ಲ. ಕೂqಲೇ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಮಳೆ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗಿದೆ. ಆದರೆ ಕೊಡಗಿನಲ್ಲಿ ರೈತರ ಖಾತೆಗೆ ಇನ್ನು ಪರಿಹಾರ ಹಣ ಬಂದಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಹೆಗ್ಗುಳ ಹೂವಯ್ಯ, ಪದಾಧಿಕಾರಿಗಳಾದ ಲಿಂಗೇರಿ ರಾಜೇಶ್, ತಲ್ತಾರೆ ರಾಜಪ್ಪ, ಗಣಗೂರು ಚಂದ್ರಶೇಖರ್, ಕಿಬ್ಬೆಟ್ಟ ಮಂದಣ್ಣ ಉಪಸ್ಥಿತರಿದ್ದರು.