ಕಣಿವೆ, ಡಿ. ೫: ಕೂಡಿಗೆ ಕೃಷಿ ಫಾರಂ ಒಳಗೆ ಇರುವ ಕೃಷಿ ಇಲಾಖೆಗೆ ಒಳಪಡುವ ಸುಮಾರು ನೂರು ಎಕರೆಗಳಷ್ಟು ವಿಶಾಲವಾದ ಭತ್ತದ ಗದ್ದೆಗಳ ವಿಹಂಗಮ ತಾಣ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವಾಗಿ ಮಾರ್ಪಡಲಿದೆ.
ಹಾಗಾಗಿ ಅಪ್ಪಟ ಹಳ್ಳಿಯ ಪರಿಸರದಿಂದ ಕೂಡಿದ ಕೃಷಿ ಇಲಾಖೆಯ ಈ ಅನ್ನದ ಒಡಲು ಮುಂದಿನ ಕೆಲವೇ ವರುಷಗಳಲ್ಲಿ ಆಧುನಿಕತೆಯ ಬೆಳವಣಿಗೆಗಳೊಂದಿಗೆ ನಗರವಾಗಿ ಮಾರ್ಪಡಲಿದೆ. ಈ ವರ್ಷದ ಕಳೆದ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ವತಿಯಿಂದ ಕೈಗೊಂಡಿರುವ ಭತ್ತದ ಕೃಷಿ ಕಟಾವಿಗೆ ಬಂದಿದೆ.
ಹಾಗಾಗಿ ಅನ್ನದ ಫಸಲಾದ ಭತ್ತದ ಗೊಂಚಲನ್ನು ಹೊತ್ತು ಬಾಗಿ ನಿಂತ ಗದ್ದೆಗಳ ಚಿತ್ರಣ ನೋಡುಗರಿಗೆ ಇನ್ನು ಮುಂದೆ ಮರೀಚಿಕೆ. ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆರೆಯಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕಾಗಿ ಕೂಡಿಗೆಯ ಹಾರಂಗಿ ನದಿಯ ದಂಡೆಯಲ್ಲಿರುವ ಕೃಷಿ ಇಲಾಖೆಯ ಈ ಜಾಗವನ್ನು ಗುರುತಿಸಿ ಅಂತಿಮಗೊಳಿಸಲಾಗಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಆಗಿಂದಾಗ್ಗೆ ಈ ಸ್ಥಳವನ್ನು ಪರಿಶೀಲಿಸಿ ಅಂತಿಮಗೊಳಿಸಿದ್ದಾರೆ. ಸರ್ಕಾರದಿಂದ ಅನುದಾನ ಬಿಡುಗಡೆಗೊಂಡೊಡನೆ ಕಾಮಗಾರಿಗಳು ಪ್ರಾರಂಭವಾಗಲಿವೆ. ಸುತ್ತಲಿನ ಗ್ರಾಮಗಳ ಕೃಷಿಕರ ಜಾನುವಾರುಗಳು ನಿಶ್ಚಿಂತೆಯಾಗಿ ಮೇಯುತ್ತಿದ್ದ ಮೇವಿನ ಈ ತಾಣ ಇನ್ನು ಕೆಲವೇ ದಿನಗಳಲ್ಲಿ ನಿಷೇಧಿತ ಪ್ರದೇಶವಾಗಿ ಮಾರ್ಪಡಲಿದ್ದು, ಜನ ಹಾಗೂ ದನಗಳಿಂದ ಈ ಪ್ರದೇಶ ದೂರವಾಗಲಿದೆ.
ಕೃಷಿಕರ ಭೂಮಿಗೂ ಚಿನ್ನದ ದರ
ಕೃಷಿ ಇಲಾಖೆಯ ಈ ಜಾಗದಲ್ಲಿ ವಿಮಾನ ನಿಲ್ದಾಣ ಆಗುವುದು ಖಚಿತವಾದೊಡನೆ ಸುತ್ತಲಿನ ಗ್ರಾಮಾಂತರ ಪ್ರದೇಶಗಳ ಕೃಷಿಕರ ಭೂಮಿಗೆ ಸಿಕ್ಕಾ ಪಟ್ಟೆ ದರ ಏರಿಕೆಯಾಗುತ್ತಿದೆ. ಕೂಡಿಗೆಯ ಒಳಭಾಗದ ಎಲ್ಲೋ ಒಂದು ಕೊಂಪೆಯಲ್ಲಿ ಯಾರಿಗೂ ಬೇಡವಾಗಿದ್ದ ಭೂಮಿಗೆ ಇದೀಗ ಚಿನ್ನದ ದರ ಬಂದುದರಿAದ ಅಲ್ಲಿನ ನಿವಾಸಿಗಳು ಅತ್ತೆಗೊಂದು ಕಾಲವಾದರೆ ಸೊಸೆಗೂ ಒಂದು ಕಾಲ ಎಂದು ಬೀಗುವಂತಾಗಿದೆ.
(ವರದಿ : ಕೆ.ಎಸ್. ಮೂರ್ತಿ)