ಸೋಮವಾರಪೇಟೆ, ಡಿ. ೫: ತಾಲೂಕಿನ ಯಲಕನೂರು ಗ್ರಾಮದ ಗಿರಿಜನ ಹಾಡಿಗಳಿಗೆ ಭೇಟಿ ನೀಡಿದ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಗಿರಿಜನರಿಗೆ ತಿಳುವಳಿಕೆ ನೀಡಿದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಾಡಿ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ತಹಶೀಲ್ದಾರ್ ನರಗುಂದ್ ಅವರು, ಹಾಡಿ ನಿವಾಸಿಗಳು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆಯೇ? ಎಂಬ ಬಗ್ಗೆ ಮಾಹಿತಿ ಪಡೆದರು.
ಸಂವಿಧಾನಾತ್ಮಕವಾಗಿ ಲಭ್ಯವಾಗಿರುವ ಮತದಾನದ ಹಕ್ಕನ್ನು ಪ್ರತಿಯೋರ್ವರೂ ಚಲಾಯಿಸಬೇಕು. ೧೮ ವರ್ಷ ತುಂಬಿದ ಎಲ್ಲರನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಿಕೊಳ್ಳಬೇಕು. ಈಗಾಗಲೇ ಹೊಂದಿರುವ ಮತದಾರರ ಗುರುತಿನ ಚೀಟಿಯಲ್ಲಿ ಯಾವುದೇ ಬದಲಾವಣೆ ಗಳಿದ್ದರೆ ಸಂಬAಧಿಸಿದ ಬಿಎಲ್‌ಓಗಳಿಗೆ ತಿಳಿಸಬೇಕು. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು ಎಂದು ತಿಳುವಳಿಕೆ ನೀಡಿದರು.
ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಗೆ ಸರ್ಕಾರದಿಂದ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ನೀಡುತ್ತಿದ್ದು, ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ, ಸಾಮಾಜಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಈ ಸಂದರ್ಭ ಕಂದಾಯ ನಿರೀಕ್ಷಕ ಪ್ರಹ್ಲಾದ್, ಗ್ರಾಮ ಲೆಕ್ಕಿಗರಾದ ಶ್ವೇತಾ, ತಾ.ಪಂ. ಅಧಿಕಾರಿಗಳಾದ ಸ್ವಾಮಿ, ರವೀಂದ್ರ ಅವರುಗಳು ಉಪಸ್ಥಿತರಿದ್ದರು.