ಪೊನ್ನಂಪೇಟೆ, ಡಿ. ೫ : ಗೋಣಿಕೊಪ್ಪಲು ಸಮೀಪದ ಅತ್ತೂರಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಕ್ರೀಡಾ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಗಾಲ್ಫ್ ಆಟಗಾರ್ತಿ ಹಾಗೂ ಪ್ರಸ್ತುತ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ನ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕ್ರೀಡೆಯನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೈಹಿಕವಾಗಿ ಸದೃಢರಾಗಬಹುದು ಎಂದು ಸಲಹೆ ನೀಡಿದರು. ಶಾಲೆಯ ಮುಖ್ಯಸ್ಥೆ ಶಾಂತಿ ಅಚ್ಚಪ್ಪ ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲೂ ಉತ್ತಮವಾಗಿ ಮುಂದುವರೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕ್ರೀಡಾಸ್ಫೂರ್ತಿ ಹಾಗೂ ಕ್ರೀಡಾ ಮನೋಭಾವನೆಯಿಂದ ಮುಂದೆ ಸಾಗಬೇಕು ಎಂದರು.

ಕಾರ್ಯಕ್ರಮದಲ್ಲಿ, ಇತ್ತೀಚೆಗೆ ದುಬೈನಲ್ಲಿ ನಡೆದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದ ವಿದ್ಯಾರ್ಥಿಗಳಾದ ಸ್ನೇಹ, ಡಿಂಪಲ್, ರವಿಕುಮಾರ್ ಹಾಗೂ ಇತರ ವಿಭಾಗಗಳಲ್ಲಿ ಸಾಧನೆ ಮಾಡಿದ ಲವಿನ, ಮಿಥುನ್, ಆಸ್ಟಿನ್, ಜೂಹೈನ ಮತ್ತು ದೈಹಿಕ ಶಿಕ್ಷಕ ರಾಜ ಅವರ ನೇತೃತ್ವದಲ್ಲಿ ಕ್ರೀಡಾಜ್ಯೋತಿಯನ್ನು ತಂದು ಅತಿಥಿಗಳಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿಗಳಿಗೆ ತರಗತಿ ಮತ್ತು ಗುಂಪಿನ ಆಧಾರದ ಮೇಲೆ ವಿವಿಧ ಬಗೆಯ ಆಟೋಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭ ಸ್ಥಳೀಯರಾದ ಮೀನಾ, ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು.

೭ನೇ ತರಗತಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ತನಿಷ್ಕ ಸ್ವಾಗತಿಸಿ, ಜುಹೈನ ಅತಿಥಿ ಪರಿಚಯ ಮಾಡಿದರು. ದಿಯಾ ಗಂಗಮ್ಮ ವಂದಿಸಿ, ಅಲೀನ ಮತ್ತು ನೇಹಾಲ್ ನಿರೂಪಿಸಿದರು.