ಹಬ್ಬಗಳೆಂದರೆ ಊರವರ, ಜನಾಂಗದ ಸಂಘಟನೆಯ ಪ್ರತೀಕ, ಎಲ್ಲರೂ ಒಂದಾಗಿ ಕಲೆತು ಪರಸ್ಪರ ಅರಿತುಕೊಂಡು ಒಗ್ಗಟ್ಟು ಮೂಡಿಸುವ ಅದರ ಮೂಲಕ ಮನಸ್ಸಿಗೆ ಸಂತೋಷ ಸಮಧಾನ ತಂದುಕೊಳ್ಳುವ ಕಾರ್ಯಕ್ರಮ ಪಂಜೆಮAಗೇಶರಾಯರು ಹೆಸರಾಂತ ಶಿಶುಸಾಹಿತ್ಯ ಕವಿಗಳು, ಕವಿಶಿಷ್ಯ ನಾಮ ಪಡೆ ಶಿಶುಗೀತೆಗಳ ಜನಕ ಎಂದೇ ಗುರುತಿಸಿಕೊಂಡ ಪಂಜೆಯವರು ೧೮೭೦ರ ದಶಕದಲ್ಲಿ ಮಡಿಕೇರಿ ಸೆಂಟ್ರಲ್ ಹೈಸ್ಕೂಲಿನ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಕೆಲವೇ ವರ್ಷಗಳ ಸೇವಾವಧಿಯಲ್ಲಿ ಕೊಡಗನ್ನು ಮೆಚ್ಚಿ ಇಲ್ಲಿನ ಹುತ್ತರಿ ಹಬ್ಬದ ಸಂಭ್ರಮ ನೋಡಿ ತಮ್ಮ ‘‘ಹುತ್ತರಿ ಹಾಡು’’ ಪದ್ಯದಲ್ಲಿ ಹೀಗೆ ಬರೆಸಿದ್ದಾರೆ.

‘‘ಒಮ್ಮತವು, ಒಗ್ಗಟ್ಟು, ಒಂದೇ ಮನವು ಎಲ್ಲಿದೆ ಹೇಳಿರಿ ?

ಸುಮ್ಮನ್ನಿಕ್ತರೋ ದಟ್ಟಿ ಕುಪ್ಪಸ ಹಾಡು ಹುತ್ತರಿಗೇಳಿರಿ

ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ

ಅಮ್ಮೆ ಹರಿಸಿದ ಸೀಮೆ ನಮಗಿದು ಇರಲಿ ನಮ್ಮದೇ ನಮ್ಮಲಿ’’

ಹುತ್ತರಿ ಕೊಡಗಿನ ವಿಶೇಷ ಸುಗ್ಗಿ ಹಬ್ಬ. ಹಬ್ಬದ ಸಮಯದಲ್ಲಿ ಎಲ್ಲವೂ ಹೊಸತನದಿಂದ ಕಂಗೊಳಿಸುತ್ತದೆ. ಹೊಸ ಭತ್ತವನ್ನು ಮನೆಗೆ ಲಕ್ಷಿö್ಮಯನ್ನು ತುಂಬಿಸಿಕೊಳ್ಳುವ ಸಂದರ್ಭ. ಪ್ರತಿಯೊಬ್ಬರ ಮನೆ, ಸುತ್ತಮುತ್ತ ಪರಿಸರ, ಊರ ದೇವನೆಲೆಗಳು ಎಲ್ಲವನ್ನು ಸ್ವಚ್ಛಗೊಳಿಸಿ ನವವಧುವಿನಂತೆ ‘ಲಕ್ಷಿö್ಮ’ಯನ್ನು ಮನೆ ತುಂಬಿಸಿಕೊಳ್ಳುವ ಸಮಯ ಮನೆಯ ಭತ್ತ ತುಂಬಿಸಿದ ಪತ್ತಾಯ ಖಾಲಿ ಆಗಿದೆ. ರೈತ ತನ್ನ ಗದ್ದೆಯಲ್ಲಿ ನೆಟ್ಟ ಪೈರು ಕದಿರು ದಾಟುವುದನ್ನು ನಿರೀಕ್ಷೆ ಮಾಡುತ್ತಾನೆ. ಹೊಸ ಕದಿರು ಕಂಡು ಸಂತೋಷಪಟ್ಟು ಮನೆಯ ಪತ್ತಾಯಕ್ಕೆ ಹೇಳುತ್ತಾನೆ ‘‘ಕದ್‌ಕಂಡ ಕದ್‌ಕಂಡ ಪತ್ತಾಯ, ಬೊತ್ತತೆ ಬೊರಂಡತೆ ಪತ್ತಾಯ !’’ ಹೆದರಬೇಡ ಕುಯ್ಲು ಕೆಲಸ ಇನ್ನೇನು ಮೊದಲಾಗುತ್ತದೆ ನೀನು ಭರ್ತಿಯಾಗುತ್ತೀಯ ಎಂದು ಭರವಸೆ ಕೊಡವ ಸಂತೋಷ ರೈತನದು, ‘ಪೊಲಿ ಪೊಲಿ ದೇವ’ (ಒಲಿದು ಬಾ, ತುಂಬಿ ಬಾ) ಎಂದು ದೇವರನ್ನು ಬೇಡಿ ಲಕ್ಷಿö್ಮಯನ್ನು ಬರಮಾಡಿಕೊಳ್ಳುವ ಹಬ್ಬವೇ ಪುತ್ತರಿ. ಮನೆಯವರು ಹಬ್ಬ ಮಾಡುವುದಕ್ಕೆ ಸುತ್ತಮುತ್ತಲಿನ ಇತರ ಜನಾಂಗದವರು ಹಬ್ಬಕ್ಕೆ ಬೇಕಾದ ಪರಿಕರಗಳನ್ನು ತಂದೊಪ್ಪಿಸುತ್ತಾರೆ. ಹೊಸಚಾಪೆ, ಹೊಸ ಮಡಿಕೆ, ಹೊಸ ಪಚ್ಚಿಯ, ಕೆರಂಜಿ, ಕೊಯ್ಲುಕತ್ತಿ, ಪೊವುದ್ ಕುತ್ತಿ, ಮಕ್ಕಳಿಗೆ ಹೊಸ ಉಡುಪು, ಪಟಾಕಿಗಳು.

ಸಂಸಾರದ ಸದಸ್ಯರು ಚಾಕರಿ ಹಿಡಿದು ಎಲ್ಲೇ ಇದ್ದರೂ ಈ ಹಬ್ಬಕ್ಕೆ ಬಂದೇ ಬರುತ್ತಾರೆ. ಹೇಳದೆ ಹೋದ ಆಳುಗಳು, ಮೇಯಿಸಲು ಬಿಟ್ಟ ದನಗಳು ಸಹ ಹಿಂತಿರುಗಿ ಬರುತ್ತವೆ, ಹಬ್ಬಕ್ಕೆ ಒಂದು ವಾರಕ್ಕೂ ಮೊದಲೇ ಎಲ್ಲೆಲ್ಲೂ ಸಂತೋಷ, ಸಂಭ್ರಮ, ಗಿಜಿಗಿಜಿ. ಪುತ್ತರಿ ಕೊಡವ ಶಬ್ದವಲ್ಲ, ಮಲಯಾಳದಿಂದ ಬಂದಿದ್ದು, ಅಲ್ಲಿ ಹೊಸಅಕ್ಕಿ ಊಟ ಮಾಡುವ ಸುಗ್ಗಿ ಹಬ್ಬ ‘ಓಣತಮ್ಮೆ ಹೆಸರಿನಲ್ಲಿ ನಡೆಯುತ್ತದೆ ಹಾಗೇ ಓಣಂ ಕಳೆದು ೯೦ ದಿನಕ್ಕೆ ಸರಿಯಾಗಿ ವೃಶ್ಚಿಕ ಮಾಸ ಹುಣ್ಣಿಮೆಯ ರೋಹಿಣಿ ನಕ್ಷತ್ರದ ದಿನದಂದು ಕದಿರು ತೆಗೆಯುವ ಶುಭಗಳಿಗೆಯನ್ನು ನಿಶ್ಚಯ ಮಾಡುವುದು ಕೊಡಗಿನ ಒಂದು ವೈಶಿಷ್ಟö್ಯ. ಇದರ ನಿಶ್ಚಯ ಕೊಡಗಿನ ಮಳೆದೇವ, ಇಂದ್ರ, ಈಶ್ವರ ಎಂದು ಕರೆಯಲ್ಪಡುವ ಇಗ್ಗುತ್ತಪ್ಪ ದೇವನೆಲೆ ಪಾಡಿಯಲ್ಲಿ ಸುತ್ತಮುತ್ತ ನಾಡಿನವರ ಸಮ್ಮುಖದಲ್ಲಿ ಆಗುತ್ತದೆ. ಇದು ಸಂಪ್ರದಾಯ ಬದ್ಧವಾಗಿ ನಡೆದು ಬಂದ ಪರಂಪರೆಯೂ ಹೌದು. ವೃಶ್ಚಿಕ ಮಾಸದ ಪೂಜೆಗೆಂದು ಊರವರು ಇಗ್ಗುತ್ತಪ್ಪ ದೇವನೆಲೆಯಲ್ಲಿ ಸೇರುತ್ತಾರೆ. ಅದಕ್ಕೂ ಮೊದಲು ಪೂಜಾ ಸಾಮಗ್ರಿಗಳೊಂದಿಗೆ ಬಂದ ಪೂಜಾರಿ ಬಾಗಿಲು ತೆರೆದಾಗ ‘‘ಓಣತಮ್ಮೆ’’ ಮಹಾತಾಯಿ ದೇವಸ್ಥಾನ ದೋಣಿ ಪ್ರತ್ಯಕ್ಷ ಕಂಡು ಬೆರಗಾದರು. ಊರವರು ಹತ್ತಿರವಿದ್ದ ಕಣಿಯನಿಗೆ ಹೇಳಿ ಕಳುಹಿಸಿದರು. ತಕ್ಕರು ಹಿರಿಯರು ಸೇರಿ ‘ಇಗ್ಗುತ್ತಪ್ಪ ದಯೆಯಿಂದ ಓಣದ ಮಹಾತಾಯಿ ಬಂದಿದ್ದಾಳೆ. ಎಲ್ಲಾ ಪರಿಕರಗಳೂ ಇವೆ. ಆದ್ದರಿಂದ ಹೊಸಬೆಳೆ ಕುಯ್ಯುವುದಕ್ಕೆ, ಹಬ್ಬದ ಕೋಲಾಟಕ್ಕೆ ಮುಹೂರ್ತ ನೋಡಿ ಎಲ್ಲರಿಗೂ ವರ್ತಮಾನ ಕಳುಹಿಸಬೇಕೆಂದು ‘ಅಚ್ಚು ್ಯತ ಕಣಿಯನಿಗೆ ಅಪ್ಪಣೆ ಕೊಡಿಸಿದರು. ಹೀಗೆ ಪುತ್ತರಿ ಸಾಮಾಗ್ರಿಗಳನ್ನು ಕೊಡಿಸುವುದು, ಮುಹೂರ್ತ ದಿನ, ಗಳಿಗೆ ನಿಶ್ಚಯಿಸುವುದು ಎಲ್ಲರಿಗೂ ತಿಳಿಸುವುದು ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿದೆ. ಹೀಗೆ ಕೊಡಗಿನಲ್ಲಿ ಪುತ್ತರಿ (ಪುದಿಯ+ಅರಿ) ಪೊವುದ್ ಕದಿರು ತೆಗೆಯುವುದು, ಕೋಲಾಟ, ಆಟ್‌ಪಾಟ್ ಪಡಿಪು ಕಾರ್ಯಕ್ರಮ ಮೊದಲಾಯ್ತು.

ಈಡು ತೆಗೆಯುವುದು :- ಹುತ್ತರಿಗೆ ಒಂದು ವಾರಕ್ಕೆ ಮೊದಲೇ ಪೂರ್ವ ತಯಾರಿ ಎಂಬAತೆ ರಾತ್ರಿ ಸಮಯದಲ್ಲಿ ಗಂಡಸರು ಊರ ಅಂಬಲ ಇಲ್ಲವೇ ಮಂದ್‌ನಲ್ಲಿ ಸೇರುತ್ತಾರೆ. ಇದಕ್ಕೂ ಮೊದಲು ‘ತಕ್ಕ’ರ ಮನೆಯಲ್ಲಿ ಸೇರಿ ‘ಬಟ್ಟೆ ಪಾಟ್’ ಹಾಕುತ್ತಾ ನಿಗದಿತ ಸ್ಥಳದಲ್ಲಿ ಸೇರುತ್ತಾರೆ. ಹಾಡು ನಿಲ್ಲಿಸಿ ನಾಡೆ ಕರೆಯುತ್ತಾರೆ. ಒಂದೊAದು ಕಡೆ ಒಂದೊAದು ಪದ್ಧತಿ ಇದೆ. ನಂತರ ಎಲ್ಲರೂ ಕೋಲು ಹೊಡೆಯುವುದು, ಬಾಯಿ ತೆರೆ ಹಾಡುವುದು ಇತ್ಯಾದಿ ತರಬೇತಿ ನಡೆಯುತ್ತದೆ. ಕೊಂಬು, ಕೊಟ್ಟ್, ವಾಲಗದ ಶಬ್ದಕ್ಕೆ ಸರಿಯಾಗಿ ಕುಣಿತ-ಅಪ್ರದಕ್ಷಿಣಾಕಾರವಾಗಿ ಸುತ್ತ ಕುಣಿಯುವುದು ಅಭ್ಯಾಸವಾಗಬೇಕು. ಇದು ಒಂದು ವಾರದವರೆಗೆ ನಡೆಯುತ್ತದೆ.

ಪೊವುದ್/ಪೊಳ್ದ್ : ಪೊವುದ್ ಎಂಬದು ಹಬ್ಬದ ಹೆಸರು. ಕೈಲ್‌ಪೊವುದ್, ಪುತ್ತರಿ ಪೊವುದ್, ಎಂದೆಲ್ಲಾ ಹೇಳುತ್ತಾರೆ. ಇದು ಕದಿರು ತೆಗೆಯುವ ಸಂದರ್ಭದಲ್ಲಿ ನಡೆಯುವ ಆಚಾರ. ಪಾಡಿ ದೇವಸ್ಥಾನದಲ್ಲಿ ನಡೆಯುವ ಪಾಡಿ ಪೊವುದ್, ರಾಜರ ಕಾಲದಲ್ಲಿ ಅರಮನೆಯಲ್ಲಿ ನಡೆಯುತ್ತಿದ್ದ ಅರಮನೆ ಪೊವುದ್, ಹಾಗೇ ಕಾಡುಗಳಲ್ಲಿ ಸಮಯಕ್ಕೆ ಸರಿಯಾಗಿ ನಡೆಯುವ ನಾಡ್‌ಪೊವುದ್ ನಿಶ್ಚಿತ ಸಮಯದಲ್ಲೇ ನಡೆಯುತ್ತದೆ. ಪಾಡಿ ಪೊವುದ್ ನಡೆದು, ಮರುದಿನ ನಾಡ್ ಪೊವುದ್ ನಡೆಯುತ್ತದೆ. ಆದಿನ ಹಬ್ಬಕ್ಕೆ ಬೇಕಾದ ಎಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಸಾಯಂಕಾಲದಲ್ಲಿ ಎಲ್ಲರೂ ಐನ್‌ಮನೆಯಲ್ಲಿ ಸೇರುತ್ತಾರೆ. ಅನುಕೂಲವಿಲ್ಲದವರು ಮನೆಯಲ್ಲೇ ಸೇರಿ ಮುಹೂರ್ತಕ್ಕೆ ಮೊದಲು ತಂದ ಎಲೆಗಳಿಂದ ನೆರೆ ಕಟ್ಟಿ ಪಚ್ಚಿಯದಲ್ಲಿ ಇಡುತ್ತಾರೆ. ಹೆಂಗಸರು ‘‘ಪಾನಿ ನೆರಪು’’ ಮಾಡುತ್ತಾರೆ. ನೆಲ್ಲಕ್ಕಿ ನಡುಬಾಡೆಯಲ್ಲಿ ಚಾಪೆ ಹಾಸಿ ಅದರ ಮೇಲೆ ಮುಕ್ಕಾಲಿ, ಅದರಲ್ಲಿ ತಳಿಯತಕ್ಕಿ ಬೊಳ್‌ಚ ಉರಿಯುತ್ತಿರುತ್ತದೆ. ಪಚ್ಚೆಯ ತುಂಬಾ ಭತ್ತ ಅದರ ಮೇಲೆ ಪಾನಿ ತುಂಬಾ ಅಕ್ಕಿ ಅದರ ಮೇಲೆ ‘ಮಾನ’ದಲ್ಲಿ ಅಕ್ಕಿಹುಡಿ, ತಂಬಿಟ್ಟುಹುಡಿ, ಹಾಗೆ ಪುತ್ತರಿ ಕುಕ್ಕೆಯಲ್ಲಿ ಸ್ವಲ್ಪ ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನಕಾಯಿ ಚೂರು, ಹಾಗಲಕಾಯಿ ಮುಳ್ಳು ಪೆರಂಬುಕುಡಿಗಳ ಮಿಶ್ರಣದ ಕಟ್ಟು ಮತ್ತು ಕೊಯ್ಲುಕತ್ತಿ ಜೋಡಿಸಿರುತ್ತಾರೆ. ಇದಾದ ಮೇಲೆ ಬೆಳೆಕೊಯ್ಲಿಗೆ ಹೊರಡುವ ಮೊದಲು ಫಲಹಾರ (ಕೆಲವು ಕಡೆ ಕದಿರು ತಂದ ಮೇಲೆ ಮಾಡುತ್ತಾರೆ. ಮನೆ ಹಿರಿಯರು, ಕುತ್ತಿ ತೆಗೆಯುವವರು ಸಾಂಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ವರ್ಷಕ್ಕೊಮ್ಮೆ ಪುತ್ತರಿ ಪೊವುದ್ ಆಚರಿಸುವುದಕ್ಕಾಗಿ ಗದ್ದೆಗೆ ಹೋಗುತ್ತಿದೇವೆ, ‘ಕುತ್ತಿ ತೆಗೆಯುವಲ್ಲಿ ಆಚಾರದಲ್ಲಿ ಯಾವುದೇ ತಪ್ಪುಗಳು ಬಾರದಂತೆ ನಡೆಸಿಕೊಡುವ ಜವಾಬ್ದಾರಿ ಇಗ್ಗುತ್ತಪ್ಪ ಈಶ್ವರ, ಮನೆಯ ಗುರುಕಾರಣರಿಗೆ ಕೂಡಿದೆ ಎಂದು ಪ್ರಾರ್ಥಿಸಿ ಅಕ್ಕಿ ಹಾಕಿ ಆಶೀರ್ವಾದ ಪಡೆಯಲು ಕಿರಿಯರು ಹಿರಿಯರ ಕಾಲು ಹಿಡಿಯುತ್ತಾರೆ. (ಕುತ್ತಿ ಹಿಡಿಯುವವನು ಕಾಲು ಹಿಡಿಯುವುದಿಲ್ಲ, ಹಿಡಿಸಿಕೊಳ್ಳುವುದೂ ಇಲ್ಲ) ಕದಿರು ತೆಗೆಯುವರು.

ಕದಿರು ತೆಗೆಯುವುದಕ್ಕಾಗಿ ಮನೆಯವರು ದೇವಸ್ಥಾನಕ್ಕೆ ಅಥವಾ ಅಂಬಲದಲ್ಲಿ ಸೇರಿ ನಂತರ ಕದಿರು ತೆಗೆಯಲು ತಯಾರಿ ಮಾಡಿರುವ ಅ ಗದ್ದೆಗೆ ಹೋಗುತ್ತಾರೆ. ಇಲ್ಲವೇ ಮನೆಯಿಂದ ನೇರವಾಗಿ ಗದ್ದೆಗೆ ತೆರಳುತ್ತಾರೆ. ಮುಂದೆ ತಳಿಯತಕ್ಕಿ ಬೆಳಕನ್ನು ಒಬ್ಬ ಕನ್ಯೆ ಹಿಡಿದಿರುತ್ತಾಳೆ. ನೇರವಾಗಿ ಕದಿರು ತೆಗೆಯುವ ಸ್ಥಳಕ್ಕೆ ತಲಪಿ ಕುತ್ತಿಯಲ್ಲಿದ್ದ ಹಾಲು, ಜೇನು ಮಿಶ್ರಿತ ಕಟ್ಟನ್ನು ಬೆಳೆಗೆ ಕಟ್ಟಿ ಹಾಲು ಸುರಿದು, ‘‘ಪೊಲಿ ಪೊಲಿ ದೇವ’’ ಎಂದು ಕದಿರನ್ನು ಕುಯ್ಯುತ್ತಾರೆ. ಮುಹೂರ್ತಕ್ಕೆ ಸರಿಯಾಗಿ ಆಕಾಶಕ್ಕೆ ಗುಂಡು ಹಾರಿಸಿ ಚಾಲನೆ ನೀಡುತ್ತಾರೆ. ಮೊದಲ ಕದಿರು ಕುತ್ತಿಗೆ, ತುಂಬಿಸಿ ನಂತರ ಎಲ್ಲರಿಗೂ ಹಂಚುತ್ತಾರೆ. ಎಲ್ಲವೂ ಲಕ್ಷಿö್ಮಯನ್ನು ಪ್ರಾರ್ಥಿಸುತ್ತಾ ‘‘ಪೊಲಿದೇವ’’ ಉಂಗಿ ಬಾ, ಬೆಳೆದು ಬಾ ಎಂದುಕೊAಡು ದಾರಿಯಲ್ಲಿ ದೇವನೆಲೆಗಳಿಗೂ ಕದಿರು ಹಾಕಿ ಮನೆ ತಲಪುತ್ತಾರೆ. ಕದಿರು ‘ಕುತ್ತಿ’ ತೆಗೆದವರನ್ನು ಕಾಲು ತೊಳೆದು, ಹಾಲುಕುಡಿಸಿ, ಹೊಸಭತ್ತದ ತೆನೆಗಳೊಂದಿಗೆ ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ. ಎಲ್ಲಾ ಕದಿರು ತೆನೆಗಳನ್ನು ನೆಲ್ಲಕ್ಕಿ ಬಾಡೆಯಲ್ಲಿ ಹಾಸಿರುವ ಚಾಪೆಯ ಮೇಲಿಟ್ಟು ದೇವರಿಗೆ ಕೈಮುಗಿಯುತ್ತಾರೆ. ಮೊದಲು ದೇವರ ಕೋಣೆಯಲ್ಲಿ ಕದಿರುಕಟ್ಟಿ ನಂತರ ಮನೆಯ ಮುಖ್ಯದ್ವಾರ, ಗೇಟು, ಬಾಗಿಲು, ಕಿಟಕಿಗಳು, ಕೊಟ್ಟಿಗೆ, ಕಣದ ಬೊಟಿ, ಕುರ್ಚಿ, ಮೇಜು, ದನದ ಕೊಟ್ಟಿಗೆ ತೆಂಗು, ಅಡಿಕೆಗಳಿಗೆಲ್ಲಾ ಕದಿರು ಕಟ್ಟುತ್ತಾರೆ. ಆ ಸಮಯದಲ್ಲಿ ಏಳಕ್ಕಿ ಪುಟ್ಟ್ ತಯಾರಾಗುತ್ತದೆ. ಅಕ್ಕಿಹಿಟ್ಟು, ತಂಬಿಟ್ಟುಹುಡಿ, ಎಳ್ಳು, ಶುಂಠಿ, ತೆಂಗಿನಕಾಯಿ ಚೂರು, ಹಾಗಲಕಾಯಿ ಚೂರು, ಪೆರಂಬುಕೊಡಿ, ಚಿಕ್ಕ ಕಲ್ಲು, ಹರಳುಗಳು, ಬಾಳೆಹಣ್ಣು, ಹಾಲು, ಜೇನು ಸೇರಿಸಿ ಕಲಸಿ ಚಿಕ್ಕ ಉಂಡೆಗಳಾಗಿ ಮಾಡಿ ಒಂದೊAದು ಆಲದ ಎಲೆಗಳಲ್ಲಿ ಇಟ್ಟು ಎಲ್ಲರೂ ತಿನ್ನುತ್ತಾರೆ. ಮದುವೆಯಾಗಿ ಹೋದವರ ಪಿತೃಗಳ ನೆನಪಿನಲ್ಲಿ ಕೆಲವು ಎಲೆಗಳನ್ನು ಹಿಟ್ಟು ಸಮೇತ ಅಟ್ಟದ ಬುಟ್ಟಕ್ಕೆ ಎಸೆಯುತ್ತಾರೆ, ಅದು ಅಲ್ಲಿ ಅಂಟಿಕೊಳ್ಳುತ್ತದೆ. ಮದುವೆಯಾದವರು ಹಬ್ಬದ ಸಮಯದಲ್ಲಿ ಬಂದರೆ ಒಂದನ್ನು ತೆಗೆದು ತಿನ್ನುವುದೂ ಇದೆ. ಇಲ್ಲಿ ಉಪಯೋಗಿಸುವ ಸೊಪ್ಪು, ಸಜೆ, ಗೆಡ್ಡೆ, ಗೆಣಸುಗಳು ಇತ್ಯಾದಿ ಪ್ರಕೃತಿ ಜನ್ಯ ಸಹಜ ವಸ್ತುಗಳನ್ನು ಹಬ್ಬದ ಪ್ರಯುಕ್ತ ಉಪಯೋಗಿಸುವ ಪದ್ಧತಿ ಪರಂಪರಾಗತವಾಗಿ ಬಂದಿರುವುದು ಒಂದು ವಿಶೇಷವೇ. ಇದೆಲ್ಲಾ ಕಾರ್ಯಕ್ರಮಗಳು ಮುಗಿಯುತ್ತಿದ್ದಂತೆ ಅಡುಗೆ ತಯಾರಾಗಿರುತ್ತದೆ. ಎಲ್ಲರೂ ಒಟ್ಟಾಗಿ ಹಬ್ಬದೂಟ ಮಾಡುವುದು ಮನಸ್ಸಿಗೆ ಮುದ ಕೊಡುÀತ್ತದೆ. ಪರಸ್ಪರ ಪ್ರೀತಿ ಹೆಚ್ಚುತ್ತದೆ. ಇಲ್ಲಿಗೆ ಪೊವುದ್ ಒಂದು ಭಾಗ ಮುಗಿಯುತ್ತದೆ.

ಕೋಲಾಟ ಹಬ್ಬ: ಮಾರನೇ ದಿನ ಊರು ತಕ್ಕ ಮನೆ ಸೇರುವ ಕಾರ್ಯಕ್ರಮ ಅಂಬಲದಲ್ಲಿ ಜೊತೆಗೂಡಿ ದುಡಿಕೊಟ್ಟ್ ಸಮೇತ ಬಟ್ಟೆಪಾಟ್, ಹಾಡುತ್ತಾ ತಕ್ಕರ ಮನೆಯ ಓಣಿ, ಹಟ್ಟಿ, ಕಯ್ಯಾಲೆ, ನೆಲ್ಲಕ್ಕಿ, ನಡುವಾಡೆಗಳ ಶೃಂಗಾರ ಅಲಂಕಾರಗಳನ್ನು ಹೊಗಳುತ್ತಾರೆ. ಆಮೇಲೆ ತಕ್ಕರ ಸತ್ಕಾರ ಸ್ವೀಕರಿಸಿ ತಕ್ಕರನ್ನು ಅವರ ಮನೆಯವರು ಹಿರಿಯರು, ಚಾಕರಿಯಲ್ಲಿರುವವರು ಇವರನ್ನೆಲ್ಲಾ ಹೊಗಳಿ ಹಾಡುತ್ತಾರೆ. ಉಳಿದವರು ಬೊಳಕಾಟ್ ಆಡುತ್ತಾರೆ. ಇವೆಲ್ಲಾ ನಮ್ಮ ಸಂಸ್ಕೃತಿ. ಮಧ್ಯಾಹ್ನ ಊಟೋಪಚಾರವಿರುತ್ತದೆ. ಮಧ್ಯಾಹ್ನದ ನಂತರ ಎಲ್ಲರೂ ತಕ್ಕರ ಮನೆ ಸೇರಿ ಸಂಪ್ರದಾಯಬದ್ಧ ಉಡುಪಿನೊಂದಿಗೆ ‘ಮಂದ್’ ಸೇರಿ ಕೋಲಾಟ, ಸಾಯಂಕಾಲ ಮನೆಹಾಡು ರಾತ್ರಿಗೆ ಅಲ್ಲಿ ಊಟ ಹೀಗೆ ಕಾರ್ಯಕ್ರಮ ನಡೆಯುತ್ತದೆ. ಕೋಲಾಟದ ಜೊತೆಗೆ ಮನೆ ಹಾಡುವ ಪದ್ಧತಿ ಮೂಲಕ ನಮ್ಮ ಸಂಸ್ಕೃತಿಯ ಹಾಡು ಕುಣಿತಗಳ ಪರಿಚಯ ಎಲ್ಲರಿಗೂ ಆಗುತ್ತದೆ. ಮನೆ-ಮನೆ ಕುಶಲೋಪರಿ ಭೇಟಿ ಎಲ್ಲರೂ ಮೆಚ್ಚುವಂತ ಕಾರ್ಯಕ್ರಮ ಈ ಪದ್ಧತಿ ಎಲ್ಲ ಕಡೆ ಇರುವುದಿಲ್ಲ. ಕೋಲಾಟ ಕಡೆಯ ದಿನ ನಾಡ್‌ಮಂದ್, ಕುಣಿತ ನಂತರ ಊರ ಅಂಬಲದಲ್ಲಿ ಕೂಡಿ ಕೋಲುಗಳನ್ನು ನೆಲದಲ್ಲಿ ಉದ್ದಕ್ಕಿಟ್ಟು ಕೈಮುಗಿದ ನಂತರ ಇಂತಹ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದಿಲ್ಲ. ಏಕೆಂದರೆ ಈ ಹಬ್ಬ ಕುಣಿತಗಳು ದೇವರಿಗೆ ಅರ್ಪಿತ ಎಂಬ ನಂಬಿಕೆ ಊರವರದ್ದು, ಹಬ್ಬಕ್ಕೆ ಮೊದಲು ಊರ ದೇವಸ್ಥಾನಗಳಲ್ಲಿ ಎಲ್ಲರೂ ಸೇರಿ ಪೂಜೆ ಮಾಡಿ ದೇವರಕಟ್ಟು ಇಡುವ ಪದ್ಧತಿ ಇದೆ. ಹಬ್ಬದ ಆಚರಣೆಯಲ್ಲಿ ಯಾವುದೇ ತಪ್ಪುಗಳಾಗದಂತೆ ಕೆಲವು ನಿಯಮಗಳನ್ನು ಮಾಡಲಾಗುತ್ತದೆ. ಊರಿನ ಒಗ್ಗಟ್ಟು ಸಾಮರಸ್ಯಕ್ಕೆ ಧಕ್ಕೆಬರದಂತೆ ಎಚ್ಚರವಹಿಸುವ ಕ್ರಮ ಇದು. ತಕ್ಕರು ಪೂಜೆ ನಂತರ ಎಲ್ಲರನ್ನು ಉದ್ದೇಶಿಸಿ ನಿಯಮಗಳನ್ನು ವಿಧಿಸುತ್ತಾರೆ.

-(ಸಂಗ್ರಹ): ಸಿ. ಎಂ. ಭೀಮಯ್ಯ

ನಿವೃತ್ತ ಉಪನ್ಯಾಸಕರು, ವೀರಾಜಪೇಟೆ.

ಮೊ: ೯೯೭೨೨೫೫೧೫೪