ಗುಜರಾತ್ ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಸಾಧ್ಯತೆ
ನವದೆಹಲಿ, ಡಿ. ೫: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಸೋಮವಾರ ಸಂಜೆ ಮುಕ್ತಾಯವಾಗಿದ್ದು, ಇದರೊಂದಿಗೆ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ತೆರೆಬಿದ್ದಿದೆ. ಈಗ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ. ಗುಜರಾತ್ ನಲ್ಲಿ ಮತದಾರ ಈ ಬಾರಿಯೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರದ ಕೈಹಿಡಿಯುವ ಸಾಧ್ಯತೆ ಇದ್ದು, ಮತ್ತೊಮ್ಮೆ ಕಮಲ ಅರಳಲಿದೆ. ಹಿಮಾಚಲದಲ್ಲಿ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಜನವರಿಯಲ್ಲಿ ಮುಖ್ಯ ಕಾರ್ಯದರ್ಶಿಗಳ ೨ನೇ ರಾಷ್ಟಿçÃಯ ಸಮಾವೇಶ
ನವದೆಹಲಿ, ಡಿ. ೫: ೨೦೨೩-೨೪ರ ಕೇಂದ್ರ ಬಜೆಟ್‌ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳ 'ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟ್ರೀಯ ಸಮಾವೇಶ'ದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ. 'ಮುಖ್ಯ ಕಾರ್ಯದರ್ಶಿಗಳ ಎರಡನೇ ರಾಷ್ಟಿçÃಯ ಸಮಾವೇಶ' ಜನವರಿಯಲ್ಲಿ ದೆಹಲಿಯಲ್ಲಿ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯುವ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ ೧, ೨೦೨೩ ರಂದು ಸಂಸತ್ತಿನಲ್ಲಿ ೨೦೨೩-೨೪ನೇ ಸಾಲಿನ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಹಿಂದೆ ನರೇಂದ್ರ ಮೋದಿ ಅವರು ೨೦೨೨ರ ಜೂನ್ ೧೬ ಮತ್ತು ೧೭ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮುಖ್ಯ ಕಾರ್ಯದರ್ಶಿಗಳ ಪ್ರಥಮ ರಾಷ್ಟ್ರೀಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು
ಮಾನವ ನಿರ್ಮಿತ ಕೊರೋನಾ ವೈರಸ್ ಸೋರಿಕೆ
ನವದೆಹಲಿ, ಡಿ. ೫: ಇಡೀ ಜಗತನ್ನು ಪೀಡಿಸಿ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ.. ಬದಲಿಗೆ ಅದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ವುಹಾನ್ ಲ್ಯಾಬ್‌ನಿಂದಲೇ ಅದು ಸೋರಿಕೆಯಾಗಿದೆ ಎಂದು ಲ್ಯಾಬ್‌ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚೀನಾದ ವುಹಾನ್‌ನಲ್ಲಿರುವ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಯುಎಸ್ ಮೂಲದ ವಿಜ್ಞಾನಿ ಆಂಡ್ರ‍್ಯೂ ಹಫ್ ಈ ಸ್ಫೋಟಕ ಹೇಳಿಕೆ ನೀಡಿದ್ದು, ಕೊರೊನಾ ವೈರಸ್ ಮಾನವ ನಿರ್ಮಿತ ವೈರಸ್ ಆಗಿದ್ದು, ಅದು ಚೀನಾದ ವುಹಾನ್‌ನಲ್ಲಿರುವ ವೈರಾಣು ಸಂಶೋಧನಾ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂದು ಅದೇ ಲ್ಯಾಬ್‌ನಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದ ಹಫ್ ಹೇಳಿದ್ದಾರೆ.
ಮೊಬಿಲಿಟಿ ಒಪ್ಪಂದಕ್ಕೆ ಭಾರತ - ಜರ್ಮನಿ ಸಹಿ
ನವದೆಹಲಿ, ಡಿ. ೫: ಭಾರತ ಮತ್ತು ಜರ್ಮನಿ ಸೋಮವಾರ ಮೊಬಿಲಿಟಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಉಕ್ರೇನ್ ಸಂಘರ್ಷ, ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳ ಕುರಿತು ಉಭಯ ದೇಶಗಳ ನಾಯಕರು ಸಮಗ್ರ ಚರ್ಚೆ ನಡೆಸಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಜರ್ಮನಿ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೈಶಂಕರ್, ಉಭಯ ದೇಶಗಳು ಮೊಬಿಲಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು. ಇದೇ ವೇಳೆ ಜೈಶಂಕರ್ ಅವರು, ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಬಲವಾಗಿ ಸಮರ್ಥಿಸಿಕೊಂಡರು ಮತ್ತು ಇದು ಹೆಚ್ಚಾಗಿ ಮಾರುಕಟ್ಟೆ ಶಕ್ತಿಗಳಿಂದ ನಡೆಸಲ್ಪಡುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಿ೨೦ ಲೋಗೋಗೆ ಬೇರೆ ಚಿಹ್ನೆ ಬಳಸಬಹುದಿತ್ತು : ಮಮತಾ
ಕೋಲ್ಕತ್ತಾ, ಡಿ. ೫: ಜಿ೨೦ ಲಾಂಛನದಲ್ಲಿ ಕಮಲದ ಬಳಕೆ ಒಂದು ಸಮಸ್ಯೆ ಅಲ್ಲ. ಆದರೆ ಈ ವಿಷಯದ ಬಗ್ಗೆ ಹೊರಗೆ ಚರ್ಚಿಸಿದರೆ, ದೇಶಕ್ಕೆ ಕೆಟ್ಟ ಹೆಸರು ಬರಬಹುದು ಎಂಬ ಕಾರಣದಿಂದ ನಾನು ಸುಮ್ಮನಿದ್ದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಹೇಳಿದ್ದಾರೆ. ಜಿ೨೦ ಲಾಂಛನಕ್ಕೆ ಕಮಲವನ್ನು ಹೊರತುಪಡಿಸಿ ಇತರ ಯಾವುದೇ ರಾಷ್ಟ್ರೀಯ ಚಿಹ್ನೆಯನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಬಹುದಿತ್ತು. ಏಕೆಂದರೆ ಆ ಹೂವು ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತದೆ ಎಂದು ಸಿಎಂ ಪ್ರತಿಪಾದಿಸಿದರು. ಭಾರತೀಯ ಜನತಾ ಪಕ್ಷದ ಬಗ್ಗೆ ಪ್ರಚಾರ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಿ೨೦ ಲೋಗೋದಲ್ಲಿ ಕಮಲವನ್ನು ಬಳಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹೂವು ದೇಶದ ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿದೆ ಎಂದು ಹೇಳಿದ್ದಾರೆ. ನವದೆಹಲಿಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ನಾನೂ ಅದನ್ನು(ಕಮಲದ ಲೋಗೋ) ನೋಡಿದ್ದೇನೆ. ಇದು ನಮ್ಮ ದೇಶಕ್ಕೆ ಸಂಬAಧಿಸಿದ ವಿಷಯವಾದ್ದರಿಂದ ನಾವು ಏನನ್ನೂ ಹೇಳುತ್ತಿಲ್ಲ. ಈ ಬಗ್ಗೆ ಹೊರಗೆ ಚರ್ಚಿಸಿದರೆ ದೇಶಕ್ಕೆ ಒಳ್ಳೆಯದಲ್ಲ" ಎಂದಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ, ೨೦೨೩ರಲ್ಲಿ ನಡೆಯುವ ಜಿ೨೦ ಶೃಂಗಸಭೆಯ ಪೂರ್ವಸಿದ್ಧತಾ ಪ್ರಕ್ರಿಯೆಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಸರ್ವಪಕ್ಷ ಸಭೆಯಲ್ಲಿ ಸಿಎಂ ಮಮತಾ ಭಾಗವಹಿಸಲಿದ್ದಾರೆ.
ಎಕ್ಸಿಟ್ ಪೋಲ್: ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್‌ಗೆ ಅಧಿಕಾರ
ನವದೆಹಲಿ, ಡಿ. ೫: ರಾಷ್ಟç ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಬಿಜೆಪಿಯ ೧೫ ವರ್ಷಗಳ ಆಡಳಿತ ಅಂತ್ಯವಾಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ೧೪೯ ರಿಂದ ೧೭೧ ಸ್ಥಾನ ಪಡೆಯುವ ಮೂಲಕ ಮೊದಲ ಬಾರಿಗೆ ಅಧಿಕಾರಕ್ಕೆ ಬರಲಿದ್ದು, ಆಡಳಿತರೂಢ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.