ಮಡಿಕೇರಿ, ಡಿ. ೪: ಅಮ್ಮತ್ತಿ ಚೌಡೇಶ್ವರಿ ಯೂತ್ ಕ್ಲಬ್ ವತಿಯಿಂದ ನಡೆದ ೨ನೇ ವರ್ಷದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಪಾಲಿಬೆಟ್ಟ ನೆಹರು ಎಫ್‌ಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಗೋಣಿಕೊಪ್ಪ ಗ್ಲೋಬಲ್ ಎಫ್‌ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಅಮ್ಮತ್ತಿ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಿಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ಕ್ರೀಡೆ ದೈಹಿಕ ಹಾಗೂ ಮಾನಸಿಕ ಬಲವನ್ನು ಹೆಚ್ಚಿಸಲು ಸಹಕಾರಿ ಯಾಗಿದೆ, ಉತ್ತಮ ಆರೋಗ್ಯವು ಲಭಿಸಲಿದೆ ಎಂದರು.

ಪ್ರಮುಖರಾದ ಕೆ.ಸಿ. ಸುಬ್ಬಯ್ಯ, ಮಾದಂಡ ತಿಮ್ಮಯ್ಯ, ಡಾ. ಟಿ.ಪಿ. ಚಂದ್ರು ಹಾಗೂ ಪಾಲಂದಿರ ಕೆ.ಎ. ರಾಧ ಅವರುಗಳು ಮಾತನಾಡಿ ಕ್ರೀಡಾಕೂಟಗಳು ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುತ್ತವೆ. ಯೂತ್ ಕ್ಲಬ್‌ನ ಈ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲೆಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಹೆಚ್.ಎನ್.ಪದ್ಮ ಹಾಗೂ ಸೇವಾ ವಿಶಿಷ್ಠಿ ಪ್ರಶಸ್ತಿಯನ್ನು ಪಡೆದ ಕೆ.ಸಿ. ಸುಬ್ಬಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕ್ಲಬ್‌ನ ಅಧ್ಯಕ್ಷÀ ವೆಂಕಟೇಶ್, ಗುತ್ತಿಗೆದಾರ ಮಂಜುನಾಥ್, ಪ್ರಮುಖರಾದ ಮಾದಂಡ ತಿಮ್ಮಯ್ಯ, ಹೆಚ್.ಆರ್. ಗಿರೀಶ್, ಪಿ.ಕೆ. ಜಾಲಿ ಪೂಣಚ್ಚ, ಕೆ.ಎ.ಹಂಸ, ಅಶ್ರಫ್, ಆಶಾ ಹೊಟೇಲ್ ಮಾಲೀಕÀ ರಮೇಶ್ ಉಪಸ್ಥಿತÀರಿದ್ದರು. ಕ್ಲಬ್‌ನ ಪ್ರಮುಖರಾದ ಕಿರಣ್ ಸ್ವಾಗತಿಸಿ, ಲತೀಫ್ ವಂದಿಸಿದರು.