ಮಡಿಕೇರಿ, ಡಿ. ೩: ಸ್ವಾರ್ಥರಹಿತವಾಗಿ ಸಮಾಜ ಸೇವೆಗೆ ಕಟಿಬದ್ದರಾಗಿರುವ ರೋಟರಿ ಸದಸ್ಯರು ಸೇವೆಗೆ ಮಾದರಿಯಾಗಿದ್ದಾರೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಎರಡು ದಿನಗಳ ರೋಟರಿ ಜಿಲ್ಲಾ ಕ್ರೀಡಾಕೂಟ ಕ್ರೀಡಾಸಿರಿಯನ್ನು ಧ್ವಜಾರೋಹಣದ ಮೂಲಕ ಉದ್ಘಾಟಿಸಿ ಮಾತನಾಡಿದ ಕೆ.ಜಿ. ಬೋಪಯ್ಯ, ಸಮಾಜದಲ್ಲಿ ರೋಟರಿ ತನ್ನದೇ ಆದ ರೀತಿಯಲ್ಲಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಡು ಕೇಳರಿಯದ ಅತಿವೃಷ್ಟಿಯಾದಾಗಲೂ ಸಂಕಷ್ಟದಲ್ಲಿದ್ದ ಜನರಿಗೆ ವೈದ್ಯಕೀಯ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ರೋಟರಿ ಅಮೂಲ್ಯ ಸೇವೆ ಮಾಡಿದೆ. ಉತ್ತಮ ಆರೋಗ್ಯ, ಗಟ್ಟಿ ಮನಸ್ಸುಗಳಿಗೆ ಕ್ರೀಡಾಚಟುವಟಿಕೆ ಹೆಚ್ಚು ಸಹಕಾರಿಯಾಗಿದೆ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ಬೋಪಯ್ಯ ಅಭಿಪ್ರಾಯಪಟ್ಟರು.
ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ, ನಿತ್ಯ ಉಲ್ಲಾಸದಿಂದ ಇರಲು ಕ್ರೀಡೆ ಅತೀ ಮುಖ್ಯ ಪಾತ್ರವಹಿಸುತ್ತದೆ. ಯಾವುದೇ ಕೋಪ ತಾಪ ನಿವಾರಣೆಗೂ ಕ್ರೀಡಾ ಚಟುವಟಿಕೆಗಳೇ ಕಾರಣ. ಧೈರ್ಯ, ಸ್ಥೆöÊರ್ಯ, ಇಚ್ಚಾಶಕ್ತಿ, ಮನೋಶಕ್ತಿಗೆ ಕ್ರೀಡೆ ಸಹಕಾರಿ ಎಂದು ಹೇಳಿದರು.
ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ವ್ಯಕ್ತಿಯ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿ ರುವ ಕ್ರೀಡೆಗಳಿಗೆ ರೋಟರಿ ಕೂಡ ಉತ್ತೇಜನ ನೀಡುತ್ತಾ ಬಂದಿರುವುದು ಶ್ಲಾಘನೀಯ. ರೋಟರಿ ಸಂಸ್ಥೆಗಳಿAದಲೂ ನಾಡಿಗೆ ಉತ್ತಮ ಕ್ರೀಡಾಪಟುಗಳು ಕೊಡುಗೆಯಾಗಿ ದೊರಕಲಿ ಎಂದು ಆಶಿಸಿದರು.
ರೋಟರಿ ಜಿಲ್ಲಾ ಕ್ರೀಡಾ ಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ಈ ವರ್ಷ ಕ್ರಿಕೆಟ್, ಬ್ಯಾಡ್ಮಿಂಟನ್, ಚೆಸ್, ಕೇರಂ, ಗಾಲ್ಫ್, ಅಥ್ಲೆಟಿಕ್ಸ್ ಕ್ರೀಡೆಗಳನ್ನು ರೋಟರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದರು.
ರೋಟರಿ ಕ್ರೀಡಾಸಿರಿಯ ಆಯೋಜಕ ಸಮಿತಿ ಅಧ್ಯಕ್ಷ ದೇವಣಿರ ತಿಲಕ್, ಸಹಾಯಕ ಗವರ್ನರ್ ರತನ್ ತಮ್ಮಯ್ಯ ಮಾತನಾಡಿ, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವಂದಿಸಿದರು. ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿದರು.
ರೋಟರಿ ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗಡೆ, ವಿಶ್ವಾಸ್ ಶೆಣೈ, ಸಹಾಯಕ ಗವರ್ನರ್ ಎಸ್.ಕೆ. ಸತೀಶ್, ವಲಯ ಸೇನಾನಿ ಎನ್.ಡಿ. ಅಚ್ಚಯ್ಯ ವೇದಿಕೆಯಲ್ಲಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಕ್ರೀಡಾಸಮಿತಿ ಪ್ರಮುಖರಾದ ಗಾನಾ ಪ್ರಶಾಂತ್, ಪಿ.ಎಂ. ಸಂದೀಪ್, ಕೋಚನ ಲವೀನ್ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದರು.
ರೋಟರಿ ಜಿಲ್ಲೆ ೩೧೮೧ಗೆ ಸೇರಿದ ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರಗಳಿಗೆ ಸೇರಿದ ೮೯ ರೋಟರಿ ಕ್ಲಬ್ಗಳಿಂದ ನೂರಾರು ಸಂಖ್ಯೆಯಲ್ಲಿ ರೋಟರಿ ಸದಸ್ಯ ಕ್ರೀಡಾಪಟುಗಳು ಕ್ರೀಡಾಸಿರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಭಾನುವಾರ ಮಧ್ಯಾಹ್ನ ಕ್ರೀಡಾಕೂಟ ಸಮಾರೋಪಗೊಳ್ಳಲಿದೆ.