ಮಡಿಕೇರಿ, ಡಿ. ೨: ದಫ್ ಮತ್ತು ಕಲಾ ಒಕ್ಕೂಟದ ವತಿಯಿಂದ ತಾ. ೩ ಮತ್ತು ೪ ರಂದು ಜಿಲ್ಲಾಮಟ್ಟದ ಬೃಹತ್ ದಫ್ ಸ್ಪರ್ಧೆ ಕುಂಜಿಲದ ಪಯ್‌ನರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಅಬ್ದುಲ್ ಮಜೀದ್ ಚೋಕಂಡಳ್ಳಿ ತಿಳಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೩ ರಂದು ಜೂನಿಯರ್ ವಿಭಾಗದ ದಫ್ ಸ್ಪರ್ಧೆ ನಡೆಯಲಿದ್ದು, ಬೆಳಿಗ್ಗೆ ೮ ಗಂಟೆಗೆ ಒಕ್ಕೂಟದ ಗೌರವಾಧ್ಯಕ್ಷ ಅಬ್ದುಲ್ ಫತ್ತಾಹ್ ಕಡಂಗ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಿಸಾರ್ ಅಹ್ಸನಿ ಕಕ್ಕಡಿಪುರಂ ಉದ್ಘಾಟನೆ ಮಾಡಲಿದ್ದಾರೆ. ಕುಂಜಿಲ ಪಯ್‌ನರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಶೌಕತ್ ಅಲಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ತಾ. ೪ ರಂದು ಬೆಳಿಗ್ಗೆ ೮ ಗಂಟೆಗೆ ಸೀನಿಯರ್ ವಿಭಾಗದ ದಫ್ ಸ್ಪರ್ಧೆ ಹಾಗೂ ರಿಫಾಯಿಯ್ಯ ರಾತೀಬ್ ಸಂಘಗಳ ದಫ್ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ ೩ ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ಲ ಫೈಜಿ ಉದ್ಘಾಟಿಸಲಿದ್ದಾರೆ. ನಿಸಾರ್ ಅಹ್ಸನಿ ಉಸ್ತಾದ್, ವಕ್ಫ್ ಬೋರ್ಡ್ ಅಧ್ಯಕ್ಷಅಬ್ದುಲ್ ಹಕೀಂ, ಮಾಜಿ ಸಚಿವ ಜೀವಿಜಯ, ಜೆಡಿಎಸ್ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಜೆಡಿಎಸ್ ಮುಖಂಡರಾದ ನಾಪಂಡ ಮುತ್ತಪ್ಪ, ಮನ್ಸೂರ್ ಆಲಿ, ಸಮಾಜ ಸೇವಕ ಮಂಥರ್ ಗೌಡ, ಕಾಂಗ್ರೆಸ್ ನಾಯಕ ಎ.ಎಸ್. ಪೊನ್ನಣ್ಣ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಿ, ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಬಶೀರ್ ಅಲಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಮುಸ್ಲಿಯಾರ್, ಕಾರ್ಯದರ್ಶಿ ಅಬ್ದುಲ್ ಲತೀಫ್ ಮುಸ್ಲಿಯಾರ್, ಸದಸ್ಯ ಹುಸೈನ್ ಹಾಜರಿದ್ದರು.