ವೀರಾಜಪೇಟೆ, ಡಿ. ೨: ಹಸು ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆಗೆ ಜನ ಹೆಚ್ಚು ಒತ್ತು ನೀಡಬೇಕು, ಇದರಿಂದ ಜೀವನೋಪಾಯಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಾಂತಾಗುತ್ತದೆ. ಜಾನುವಾರುಗಳಿಗೆ ತಗಲುವ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ತಾಲೂಕು ಪಶು ಆಸ್ಪತ್ರೆ ವೀರಾಜಪೇಟೆ ಇದರ ಸಹಯೋಗದಲ್ಲಿ ವೀರಾಜಪೇಟೆಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ, ಪಶು ಚಿಕಿತ್ಸಾ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಬೋಪಯ್ಯ ಅವರು, ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಾಕು ಪ್ರಾಣಿಗಳಿಗೆ ಏನಾದರೂ ಸಮಸ್ಯೆ ಕಂಡುಬAದಲ್ಲಿ ಸಾರ್ವಜನಿಕರು ಸಹಾಯವಾಣಿ ೧೯೧೨ ಸಂಖ್ಯೆಗೆ ಕರೆ ಮಾಡಿ, ಸಂಚಾರಿ ವಾಹನ ಅಲ್ಲಿಗೆ ಬಂದು ಚಿಕಿತ್ಸೆ ಒದಗಿಸುವ ಕೆಲಸ ಮಾಡುತ್ತದೆ.
ಈ ವಾಹನ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನಾದ್ಯಂತ ಸಂಚರಿಸುತ್ತದೆ. ತಾಲೂಕು ಪಶು ಆಸಪತ್ರೆಯಲ್ಲಿ ಸದ್ಯಕ್ಕೆ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ದೊರಕುತ್ತವೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ನವೀನ್ ಕುಮಾರ್ ವಿ.ಎಸ್. ಹಾಗೂ ಡಾ. ರಾಕೇಶ್ ಟಿ.ಜೆ. ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಬಿಜೆಪಿ ಪ್ರಮುಖ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ಪುರಸಭೆ ಅಭಿಯಂತರ ಹೇಮ್ ಕುಮಾರ್, ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ ಮಂದಣ್ಣ, ಬಿಜೆಪಿಯ ಸಚಿನ್ ಕುಟ್ಟಯ್ಯ, ತಸ್ಲಿಂ ಅಕ್ತರ್, ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.