೧೯೪೪ರ ಜೂನ್ ೧ ರಂದು ಕಾವಾಡಿ ಗ್ರಾಮದ ನೆಲಮಕ್ಕಡ ಡಾ. ಉತ್ತಪ್ಪ-ದೊಡ್ಡುರವರ ಮಗನಾಗಿ ಮೋಹನ್ ಅಯ್ಯಪ್ಪ ಜನಿಸಿದರು. ಶಾಲಾ ವಿದ್ಯಾಭ್ಯಾಸವನ್ನು ಬೆಂಗಳೂರಿನ ಕಿಂಗ್ ಜಾರ್ಜ್ ಶಾಲೆ ಯಲ್ಲಿಯೂ, ಕಾಲೇಜು ವಿದ್ಯಾಭ್ಯಾಸವನ್ನು ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿ ನಲ್ಲಿ ಕೃಷಿ ಪದವಿಯನ್ನು ಅಲಹಬಾದ್ ವಿಶ್ವ ವಿದ್ಯಾನಿಲಯದಲ್ಲ್ಲಿ ಪಡೆದರು.

ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅಯ್ಯಪ್ಪ ಅವರು ಕಳೆದ ೫೬ ವರ್ಷಗಳಿಂದ ತಮ್ಮನ್ನು ಕ್ರೀಡೆಯಲ್ಲಿ ಕ್ರೀಡಾ ಏಳಿಗೆಗಾಗಿ ತೊಡಗಿಸಿಕೊಂಡಿ ದ್ದಾರೆ. ಮುಖ್ಯವಾಗಿ ಶಾಲಾ ದಿನಗಳಿಂದಲೇ ಹಾಕಿ ಮತ್ತು ಫುಟ್ಬಾಲ್ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು, ಇತರ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದರು. ಶಾಲಾ ದಿನಗಳಲ್ಲಿ ಹಾಕಿ ತಂಡದ ನಾಯಕರಾಗಿ ದ್ದರು. ಅಲ್ಲದೆ ಬೆಂಗಳೂರು ಸ್ಕೂಲ್ಸ್ ಮತ್ತು ಅಥ್ಲೆಟಿಕ್ ಸಂಸ್ಥೆಯ ಮುಂದಾಳಾಗಿದ್ದರು.

೧೯೬೧-೬೩ರಲ್ಲಿ ಉತ್ತಮ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮೋಹನ್ ಅಪ್ಪಯ್ಯ ಪಾತ್ರರಾದರು. ಹಾಕಿ, ಇತರ ಕ್ರೀಡೆ ಮತ್ತು ಅಂಗ ಸಾಧನೆಯಲ್ಲಿ ೧೯೬೨-೬೩ರಲ್ಲಿ ಹಲವು ಬಾರಿ ಪ್ರಶಸ್ತಿಗಳನ್ನು ಪಡೆದರು. ೧೯೬೩ರಲ್ಲಿ ಶಾಲಾ ಮಟ್ಟದ ೧೦೦ ಮೀಟರ್ ಓಟದಲ್ಲಿ ಮೋಹನ್ ಅಯ್ಯಪ್ಪ ನಿರ್ಮಿಸಿದ ದಾಖಲೆಯನ್ನು ನಂತರದ ೪೬ ವರ್ಷಗಳಲ್ಲಿ ಯಾವುದೇ ಶಾಲಾ ಮಟ್ಟದ ವಿದ್ಯಾರ್ಥಿ ಈ ದಾಖಲೆಯನ್ನು ಮುರಿಯಲಾಗಲಿಲ್ಲ. ಅಂತಹ ಚತುರ ಓಟಗಾರರಾಗಿದ್ದರು.

ಕಾಲೇಜಿನ ದಿನಗಳಲ್ಲಿ ಹಾಕಿ ಮತ್ತು ಇತರ ಕ್ರೀಡೆಗಳ ತಂಡದ ನಾಯಕರಾಗಿದ್ದು, ೧೯೬೯-೭೦ ರಲ್ಲಿ ಶ್ರೀಲಂಕಾದಲ್ಲಿ ನಡೆದ ಕ್ರೀಡೆಯಲ್ಲಿ ಉತ್ತರ ಪ್ರದೇಶದ ಅಲಹಬಾದ್ ವಿಶ್ವವಿದ್ಯಾನಿಲಯ ತಂಡ ಹಾಗೂ ಅಲಹಬಾದ್ ಜಿಲ್ಲಾ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು.

೧೯೭೦ರಲ್ಲಿ ಮೋಹನ್ ಅಯ್ಯಪ್ಪ ವಿದ್ಯಾಭ್ಯಾಸ ಮುಗಿಸಿ ಕೊಡಗಿಗೆ ಬಂದರು. ನಂತರ ೧೯೭೫ರವರೆಗೆ ಮಡಿಕೇರಿಯ ವಾಂಡರ‍್ಸ್ ಕ್ಲಬ್ಬಿನ ಪರವಾಗಿ ಆಡಿದರು. ೧೯೮೮ರವರೆಗೆ ಹಾಕಿ ಮತ್ತು ಫುಟ್ಬಾಲ್ ಆಡಿದರು. ನಂತರದಲ್ಲಿ ಕೊಡಗಿನಲ್ಲಿಯೇ ೧೯೭೯, ೮೦, ೮೧ರಲ್ಲಿ ಡಾ. ಎನ್. ಬಿ. ಉತ್ತಪ್ಪ ಜ್ಞಾಪಕಾರ್ಥ' (ತಂದೆಯ ಜ್ಞಾಪಕಾರ್ಥ) ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಉತ್ತಮ ಆಟಗಾರರನ್ನೊಳಗೊಂಡ ಡೈನಾಮೈಟ್ಸ್ ತಂಡ ವನ್ನು ತಾವೇ ರಚಿಸಿ, ೧೯೮೩ ರಿಂದ ೨೦೦೦ರವರೆಗೆ ಕೊಡಗಿನಾದ್ಯಂತ ಅನೇಕ ಪಂದ್ಯಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದರು. ದಾಖಲೆ ನಿರ್ಮಿಸಿದ ನೆಲ್ಲಮಕ್ಕಡ ಕಪ್ ಪಂದ್ಯಾವಳಿಗೆ ೨೦೦೨ ರಲ್ಲಿ ಮೋಹನ್ ಅಯ್ಯಪ್ಪನವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಯಿತು.

ಮೋಹನ್ ಅಯ್ಯಪ್ಪನವರು ಕ್ರೀಡೆಯಲ್ಲಿ ಮಾತ್ರವಲ್ಲದೆ, ಹಲವು ಸಂಘ-ಸAಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡರು. ವೀರಾಜಪೇಟೆಯ ರೋಟರಿ ಕ್ಲಬ್‌ನ ಸದಸ್ಯರಾಗಿಯೂ, ಅಧ್ಯಕ್ಷರಾಗಿಯೂ, ಸಭಾದಿಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ವೀರಾಜಪೇಟೆ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ನ ಅಧ್ಯಕ್ಷರಾಗಿ ೧೦ ವರ್ಷ ಸೇವೆ, ಯುವಜನ ಸೇವಾ ಇಲಾಖೆಯ ಸ್ಟೇಡಿಯಂ ಕಮಿಟಿಯ ಸದಸ್ಯರಾಗಿಯೂ, ಕೊಡಗು ಹಾಕಿ ಸಂಸ್ಥೆಯ ಅಧ್ಯಕ್ಷರಾಗಿಯೂ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರಾಗಿಯೂ, ವೀರಾಜಪೇಟೆಯ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರಾಗಿಯೂ, ವೀರಾಜಪೇಟೆಯ ಕೊಡವ ಸಮಾಜ ಸ್ಪೋಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷರಾಗಿಯೂ, ಬೆಂಗಳೂರಿನ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನೆಸ್ಟ್ ಇಂಡಿಯಾ-೨೦೦೦ರಲ್ಲಿ ಹಾಕಿ ಕ್ರೀಡೆಗೆ ಉತ್ತಮ ಸೇವೆ ಸಲ್ಲಿಸಿದಕ್ಕಾಗಿ ಮೋಹನ್ ಅಯ್ಯಪ್ಪ ಅವರನ್ನು ಗೌರವಿಸಿದೆ. ಮೋಹನ್ ಅಯ್ಯಪ್ಪ ಅವರು ಪುಟ್ಟಿಚಂಡ ಮಾಲಾ ಅವರನ್ನು ಮದುವೆಯಾಗಿದ್ದು, ಸಚಿನ್ ಮತ್ತು ಲವಿನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ತಂದೆಯAತೆ ಮಕ್ಕಳು ಉತ್ತಮ ಕ್ರೀಡಾಪಟುಗಳಾಗಿದ್ದು, ಹಾಕಿಯಲ್ಲಿ ಸಚಿನ್ ಉತ್ತಮ ಆಟಗಾರನಾಗಿದ್ದು, ಲವಿನ್ ಉತ್ತಮ ಗೋಲ್‌ಕೀಪರ್ ಆಗಿದ್ದಾರೆ.

-ಚೆಪ್ಪುಡೀರ ಕಾರ್ಯಪ್ಪ,

ಹಾಕಿ ವೀಕ್ಷಕ ವಿವರಣೆಗಾರರು.