ಹೊದ್ದೂರು, ಡಿ. ೨: ಈ ಬಾರಿ ರೋಬಸ್ಟಾ ಕಾಫಿ ಅವಧಿಗೂ ಮುನ್ನವೇ ಕೊಯ್ಲಿಗೆ ಬಂದಿದೆ. ಪ್ರಕೃತಿಯ ವಿಚಿತ್ರವೋ ಹವಾಮಾನ ವೈಪರೀತ್ಯದ ಪ್ರಭಾವವೋ ಎನೋ ಎಂಬAತೆ...! ವಾಡಿಕೆಯಂತೆ ಡಿಸೆಂಬರ್ ಮೊದಲ ಅಥವಾ ದ್ವಿತೀಯ ವಾರದ ಬಳಿಕ ರೋಬಸ್ಟಾ ಕಾಫಿಯು ಕೊಯ್ಲಿಗೆ ಬರುತ್ತಿತ್ತು. ಆದರೆ, ಜಿಲ್ಲೆಯ ವಿವಿಧೆಡೆಗಳಲ್ಲಿ ನವೆಂಬರ್ ಮೊದಲ ವಾರದಿಂದಲೇ ರೋಬಸ್ಟಾ ಮತ್ತು ಡ್ವಾರ್ಫ್ ರೋಬಸ್ಟಾ ತಳಿಗಳ ಕೊಯ್ಲು ಭರದಿಂದ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಕೆಲವರು ಕಾಫಿ ಕೊಯ್ಲಾದ ಕೂಡಲೇ ತೋಟಕ್ಕೆ ನೀರು ನೀಡುವುದರಿಂದ ಕಾಫಿ ಬೆಳೆ ಎಂದಿಗಿAತಲೂ ಬೇಗ ಕೊಯ್ಲಿಗೆ ಬಂದಿದೆ ಎನ್ನಲಾಗಿದೆ.
ಬೆಳೆಗಾರರ ಸಂಕಟ: ಜಿಲ್ಲೆಯ ವಿವಿಧೆಡೆ ರೋಬಸ್ಟಾ ಕಾಫಿ ಆಕಾಲಿಕವಾಗಿ ಹಣ್ಣಾಗುತ್ತಿದೆ. ಈ ವರ್ಷ ಬಿದ್ದ ಭಾರೀ ಮಳೆ, ಹವಾಮಾನ ವೈಪರೀತ್ಯಗಳ ಪರಿಣಾವೋ ಏನೋ ಎಂಬAತೆ ಕಂಡುಬರುತ್ತಿದೆ. ಕೆಲವು ಗಿಡಗಳಲ್ಲಿ ಪೂರ್ತಿ ಹಣ್ಣುಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕೊಯ್ಲು ಆರಂಭವಾಗಿದೆ. ಅಧಿಕ ಬಿಸಿಲು ಬೀಳುವ ತೋಟಗಳಲ್ಲಿ, ಗದ್ದೆಯ ಕಾಫಿ ತೋಟಗಳಲ್ಲಿ ಹಣ್ಣಿನ ಪ್ರಮಾಣ ತುಸು ಹೆಚ್ಚಾಗಿ ಕಾಣಬರುತ್ತಿದೆ. ಪರಿಣಾಮ ಜಿಲ್ಲೆಯ ಕೆಲ ಕಡೆಗಳಲ್ಲಿ ಬೆಳೆಗಾರರು ಸಂಕಟಕ್ಕೆ ಸಿಲುಕಿದ್ದಾರೆ.
ಕೆಲವು ಕಡೆಗಳಲ್ಲಿ ಗಿಡಗಳಲ್ಲಿರುವ ಕಾಫಿಯ ಶೇ. ೫೦ ಭಾಗ ಹಣ್ಣಾಗಿದೆ. ಆದರೆ, ಕೆಲವು ಗಿಡಗಳಲ್ಲಿ ಪೂರ್ತಿ ಹಣ್ಣು ! ಇದರಿಂದ ಕೊಯ್ಲು ನಿರಾತಂಕವಾಗಿ ಸಾಗಲು ಅಡ್ಡಿಯಾಗಿದೆ. ಕೆಲವು ಬೆಳೆಗಾರ ಬಳಿ ಅತಿ ಸಣ್ಣ ಗಾತ್ರದ ಕಾಫಿ ಇದೆ. (ಸುಮಾರು ೬ ಮಿಲಿಮೀಟರ್ ಗಾತ್ರಕ್ಕೂ ಕಿರಿದು !) ಈ ಕಾಫಿಯು ಹಣ್ಣಾದಲ್ಲಿ ಅದು ಬೇಗನೆ ಒಣಗುತ್ತದೆ. ಇದರ ಸಿಪ್ಪೆ ತೆಳುವಾಗಿದ್ದು, ಅದರಲ್ಲಿ ಗೋಂದಿನ ಅಂಶ ಕಡಿಮೆ ಇರುತ್ತದೆ. ಇಂತಹ ಕಾಫಿಯ ಔಟರ್ನ್ ತುಂಬಾ ಚೆನ್ನಾಗಿರುತ್ತದೆ. ಈ ಮಾದರಿಯ ಕಾಫಿಯು ಬೇಗನೆ ಹಣ್ಣಾಗಿರುವುದು ಗೋಚರಿಸಿದೆ. ಕೆಲವರು ಅಲ್ಪ ಪ್ರಮಾಣದ ರೋಬಸ್ಟಾ ಕಾಫಿ ಮಾರಿ ಬೆಲೆ ಏರಿಕೆಯ ಲಾಭವನ್ನು ಪಡೆದವರಿದ್ದಾರೆ !
(ಮೊದಲ ಪುಟದಿಂದ) ವರುಣನ ವಕ್ರದೃಷ್ಟಿ: ಜಿಲ್ಲೆಯ ವಿವಿಧೆಡೆ ಅರೇಬಿಕಾ ಕಾಫಿ ಮತ್ತು ಅಲ್ಪಾವಧಿ ಭತ್ತದ ಬೆಳೆ ಕೊಯ್ಲು ಪ್ರಗತಿಯಲ್ಲಿದೆ. ಹವಾಮಾನ ವೈಪರೀತ್ಯ, ಮೋಡ ಕವಿದ ವಾತಾವರಣ, ಕಾರ್ಮಿಕರ ಸಮಸ್ಯೆ ಮುಂತಾದ ಸಮಸ್ಯೆಗಳಲ್ಲಿ ಬೆಳೆಗಾರರು ಮುಳುಗೇಳುತ್ತಿರುವರು. ಇಲ್ಲಿನ ಬೆಳೆಗಾರ ಮೇಲೆ ವರುಣ ವಕ್ರದೃಷ್ಟಿ ಬಿದ್ದಂತೆ ತೋರುತ್ತಿದೆ. ಇತ್ತೀಚೆಗೆ ತಾನೇ ಮೋಡ ಕವಿದ ವಾತಾವರಣದಿಂದ ಜಿಲ್ಲೆಯು ಇದೀಗ ಮುಕ್ತಿ ಹೊಂದಿಲ್ಲ. ಕೆಲವು ಕಡೆ ಅಲ್ಲಲ್ಲಿ ಸಿಡಿಲು ಸಹಿತ ತುಂತುರು ಮಳೆ, ವಾತಾವರಣದಲ್ಲಿ ಅಧಿಕ ಪ್ರಮಾಣದ ತೇವಾಂಶವಿದೆ. ಹೆಚ್ಚಾಗಿ ಬೀಳುತ್ತಿರುವ ಇಬ್ಬನಿಯಿಂದಾಗಿ ಒಣ ಹಾಕಿದ ಕಾಫಿ ಆಗಾಗ ಒದ್ದೆಯಾಗುತ್ತಿದೆ. ಕೊಯ್ಲಾದ ಕಾಫಿಯು ವಾತಾವರಣದ ವೈಪರೀತ್ಯ, ಏರಿಳಿತಗಳಿಂದ ಶೀಘ್ರವಾಗಿ ಒಣಗುತ್ತಿಲ್ಲ.
ತೂಕ ಕಡಿಮೆಯಾಗುವ ಆತಂಕ: ಜಿಲ್ಲೆಯ ಹಲವಾರು ಕಡೆ ನಿತ್ಯನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಮಳೆಯಾದ ಬಳಿಕ ಹಣ್ಣು ಕಾಫಿ ಸಿಪ್ಪೆ ಒಡೆದು ಅದರ ಅಂಟು ಕಡಿಮೆಯಾಗಲಿದೆ. ಮೇಘ ಮುಸುಕಿದ ವಾತಾವರಣ ಕಾಫಿ ಒಣ ಹಾಕಲು ಸಮಸ್ಯೆಯಾಗಿದೆ. ಪರಿಣಾಮ ಹಲವಾರು ಬೆಳೆಗಾರರು ಕೊಯ್ಲಾದ ಕಾಫಿಯನ್ನು ಚೀಲಗಳಲ್ಲಿ ಸಂಗ್ರಹಿಸಿಟ್ಟಿರುವರು. ಈ ಹವಾಮಾನ ಇದೇ ರೀತಿ ಮುಂದುವರಿದ್ದಲ್ಲಿ ಕಾಫಿಯನ್ನು ಒಣಗಿಸುವುದು ಹೇಗೆ ? ಎಂಬ ಭಯ ಬಹುತೇಕ ಬೆಳೆಗಾರರನ್ನು ಕಾಡುತ್ತಿದೆ. ವಾರಗಟ್ಟಲೆ ಕಾಫಿಯನ್ನು ಹಸಿ ಕಾಫಿಯನ್ನು ಚೀಲಗಳಲ್ಲಿ ದಾಸ್ತಾನಿರಿಸಿದರೆ, ಅದರ ತೂಕ ಕಡಿಮೆಯಾದೀತು. ಗುಣಮಟ್ಟ ಕುಸಿದೀತೆಂಬ ಭಯದಿಂದಲೇ ಬೆಳೆಗಾರರು ದಿನಗಳೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕೈಗೆ ಬಾರದ ತುತ್ತು: ಕಳೆದ ಬಾರಿ ರೋಬಸ್ಟಾ ಚೆರಿ ಕಾಫಿ ಪ್ರತಿ ೫೦ ಕಿಲೋಗ್ರಾಂಗೆ ೪ ಸಾವಿರಕ್ಕೂ ಅಧಿಕ ಬೆಲೆ ದೊರೆತ್ತಿತ್ತು. ತರುವಾಯ ರೋಬಸ್ಟಾ ಮತ್ತು ಅರೇಬಿಕಾ ತಳಿಯ ಬೆಲೆಗಳಲ್ಲಿ ಕೊಂಚ ಚೇತರಿಕೆ ಕಂಡುಬAದಿತ್ತು. ಇದೀಗ ಹೊಸ ಫಸಲು ಮಾರುಕಟ್ಟೆ ಪ್ರವೇಶಿಸಿರುವಂತೆ, ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಸದ್ಯ ಅರೇಬಿಕಾ ಚೆರಿ ಪ್ರತಿ ೫೦ ಕಿಲೋ ಗ್ರಾಂಗೆ ೬,೫೦೦ ರೂಪಾಯಿಗಳ ಅಸುಪಾಸಿನಲ್ಲಿದೆ. ಅದೇ ರೀತಿ ರೋಬಸ್ಟಾ ಬೆಲೆಯು ಚೆನ್ನಾಗಿದೆ. ಇಂತಹ ಸುಸಮಯದಲ್ಲಿ ಕೈಗೆ ಬಂದ ಬೆಳೆಯನ್ನು ಬೇಗನೆ ಕೊಯ್ಲು ಮಾಡಲು ಮೇಘರಾಜನು ಅಡ್ಡವಾಗಿರುವನು. ಇದರಿಂದಾಗಿ ಉತ್ತಮ ಬೆಲೆಯು ಬೆಳೆಗಾರರ ಕೈಜಾರಿ ಹೋಗುವ ಸಂಭವವಿದೆ. - ಕೂಡಂಡ ರವಿ, ಹೊದ್ದೂರು