ಮಡಿಕೇರಿ, ನ. ೩೦: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಸದಸ್ಯರಿಗೆ ಒಳಾಂಗಣ ಕ್ರೀಡಾಕೂಟ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಶರೀನ್, ಸದಾ ಒತ್ತಡದಲ್ಲಿ ಕಾರ್ಯನಿರ್ವ ಹಿಸುವ ಪತ್ರಕರ್ತರಿಗೆ ಕ್ರೀಡಾಕೂಟ ಆಯೋಜನೆಯಿಂದ ಮನಸ್ಸು ತಿಳಿಯಾಗಲು ಸಹಕಾರಿಯಾಗುತ್ತದೆ. ಇದರಿಂದ ಪತ್ರಕರ್ತರು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಕ್ರೀಡಾಕೂಟಗಳು ಹೆಚ್ಚು ಆಯೋಜಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಕೊಡಗು ಪ್ರೆಸ್ ಕ್ಲಬ್ ವಿನೂತನ ಕಾರ್ಯಕ್ರಮಗಳ ಮೂಲಕ ಛಾಪು ಮೂಡಿಸುತ್ತಿದೆ. ಇಂತಹ ಕ್ರೀಡಾ ಕೂಟಗಳಲ್ಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗುತ್ತದೆ. ಜೊತೆಗೆ ಪತ್ರಕರ್ತರು ಆರೋಗ್ಯದ ಕಡೆಗೂ ಗಮನ ಹರಿಸುವಂತಾಗಬೇಕೆAದು ಕಿವಿಮಾತು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮ ಸಂಚಾಲಕ ರೆಜಿತ್ ಕುಮಾರ್ ಮಾತನಾಡಿ, ತಾ. ೧೮ ರಂದು ಪ್ರೆಸ್ ಕ್ಲಬ್ ಡೇ ನಡೆಯಲಿದ್ದು, ಇದರ ಭಾಗವಾಗಿ ಇಂದು ಒಳಾಂಗಣ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ. ಅಂದು ಪತ್ರಕರ್ತರ ಕುಟುಂಬಸ್ಥರು ಹಾಗೂ ವಿಶೇಷವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದ್ದು, ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಒಳಾಂಗಣ ಕ್ರೀಡಾಕೂಟ ಸಂಚಾಲಕ ಕುಪ್ಪಂಡ ದತ್ತಾತ್ರಿ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನನಾಯಕ್ ಪ್ರಾರ್ಥಿಸಿ, ನಿರ್ದೇಶಕ ಸುನಿಲ್ ಪೊನ್ನೆಟ್ಟಿ ನಿರೂಪಿಸಿದರೆ, ನಿರ್ದೇಶಕ ನವೀನ್ ಡಿಸೋಜ ವಂದಿಸಿದರು.