ಪಿಎಫ್‌ಐ ಮೇಲಿನ ನಿಷೇಧ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು, ನ. ೩೦: ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿದೆ. ಕೇಂದ್ರ ಸರ್ಕಾರದ ನಿಷೇಧ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಹಾಗೂ ನಿಷೇಧಿತ ಸಂಘಟನೆಯ ರಾಜ್ಯಾಧ್ಯಕ್ಷ ನಾಸಿರ್ ಅಲಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಈ ಮೂಲಕ ಹೈಕೋರ್ಟ್ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ೧೯೬೭ರ ಸೆಕ್ಷನ್ ೩, ಉಪ ನಿಯಮ ೩ರ ಅಡಿ ಪಿಎಫ್‌ಐ ನಿಷೇಧಿಸಿರುವುದು ಕಾನೂನು ಬಾಹಿರ ಮತ್ತು ಪಿಎಫ್‌ಐ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮ ಎಂದು ಪಿಎಫ್‌ಐ ಪರ ಹಿರಿಯ ವಕೀಲ ಜಯಕುಮಾರ್ ಪಾಟೀಲ್ ವಾದಿಸಿದ್ದರು. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪಿಎಫ್‌ಐ ದೇಶ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದು, ದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳೊAದಿಗೆ ಕೈಜೋಡಿಸಿ ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಎಲ್ಲ ಆಧಾರಗಳನ್ನು ಸಂಗ್ರಹ ಮಾಡಿದ ಬಳಿಕವೇ ಪಿಎಫ್‌ಐ ನಿಷೇಧಿಸಲಾಗಿದೆ. ಇದರಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಕೇಂದ್ರ ಸರ್ಕಾರ ಸೆಪ್ಟೆಂಬರ್ ೨೮ ರಂದು ತಕ್ಷಣದಿಂದ ಜಾರಿಗೆ ಬರುವಂತೆ ಪಿಎಫ್‌ಐ ಮತ್ತು ಅದರ ಮಿತ್ರ ಸಂಘಟನೆಗಳನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಿ ಆದೇಶ ಹೊರಡಿಸಿತ್ತು. ದೇಶಾದ್ಯಂತ ಪಿಎಫ್‌ಐ ಕಚೇರಿಗಳು ಮತ್ತು ಅದರ ಸದಸ್ಯರ ನಿವಾಸಗಳ ಮೇಲೆ ದಾಳಿ ನಡೆಸಿದ ನಂತರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತ್ತು.

ರೈಲ್ವೇ ಮಾರ್ಗ ಸರ್ವೆ ಕಾರ್ಯಕ್ಕೆ ಗ್ರಾಮಸ್ಥರ ವಿರೋಧ

ಹುಣಸೂರು, ನ. ೩೦: ಕೊಡಗಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ೮೭.೫ ಕಿಲೋಮೀಟರ್ ಉದ್ದದ ಮೈಸೂರು- ಕುಶಾಲನಗರ ರೈಲ್ವೇ ಮಾರ್ಗದ ಸರ್ವೆ ಕಾರ್ಯಕ್ಕೆ ಬಿಳಿಕೆರೆ ಸಮೀಪದ ಚಿಕ್ಕಬೀಚನಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಒಟ್ಟು ೧೮೫೪.೬೨ ಕೋಟಿ ರೂಪಾಯಿ ವೆಚ್ಚದ ಉದ್ದೇಶಿತ ರೈಲ್ವೇ ಯೋಜನೆಗೆ ೨೦೧೯ರ ಫೆ. ೨೭ ರಂದು ರೈಲ್ವೇ ಸಚಿವಾಲಯ ಅನುಮೋದನೆ ನೀಡಿತ್ತು. ಈ ಹಿಂದೆ ೨೦೧೮ ರಲ್ಲಿ ಈ ರೈಲ್ವೇ ಯೋಜನೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ ಎಂಬ ಕಾರಣ ಮುಂದೊಡ್ಡಿ ರೈಲ್ವೇ ಇಲಾಖೆ ಯೋಜನೆಯನ್ನೇ ಕೈ ಬಿಟ್ಟಿತ್ತು. ನಂತರ ಸಂಸದ ಪ್ರತಾಪ ಸಿಂಹ ಅವರ ಒತ್ತಡದ ನಂತರ ಯೋಜನೆ ಅನುಮೋದನೆ ಗೊಂಡಿದ್ದು ಫೈನಲ್ ಲೊಕೇಷನ್ ಸರ್ವೆ ನಡೆಸಲು ಇಲಾಖೆ ಎರಡು ಬಾರಿ ಟೆಂಡರ್ ನೀಡಿದ್ದರೂ ಗುತ್ತಿಗೆ ಪಡೆದ ಗುತ್ತಿಗೆದಾರರು ಸರ್ವೆ ಕಾರ್ಯ ನಡೆಸದೆ ನಿರ್ಗಮಿಸಿದ್ದರು. ಇದೀಗ ಮೂರನೇ ಬಾರಿ ಸರ್ವೆಗೆ ಟೆಂಡರ್ ನೀಡಿದ್ದು ಸರ್ವೆ ಕಾರ್ಯ ಪ್ರಗತಿಯಲ್ಲಿರುವಾಗಲೇ ಸಂಸದ ಪ್ರತಾಪ್ ಸಿಂಹ ಬೇರೆಡೆ ಹೋಗುತ್ತಿದ್ದ ರೈಲ್ವೆ ಮಾರ್ಗವನ್ನು ನಮ್ಮ ಊರಿನ ಕಡೆಗೆ ಮಾಡಿದ್ದಾರೆ ಎಂದು ಆರೋಪಿಸಿ ಚಿಕ್ಕಬೀಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸುಳ್ಳು ಪತ್ತೆ ಪರೀಕ್ಷೆಯಲ್ಲಿ ತಪ್ಪೊಪ್ಪಿಕೊಂಡ ಅಫ್ತಾಬ್ ಪೂನಾವಾಲಾ

ನವದೆಹಲಿ, ನ. ೩೦: ರಾಷ್ಟç ರಾಜಧಾನಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ನಡೆಸಿದ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ತನ್ನ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ವಾಲ್ಕರ್‌ನನ್ನು ಕೊಂದು, ಆಕೆಯ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದಾಗಿ ಆಫ್ತಾಬ್ ಅಮೀನ್ ಪೂನಾವಾಲಾ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆರು ಸೆಷನ್ಸ್ಗಳ ನಂತರ, ಸುಳ್ಳು ಪತ್ತೆ ಪರೀಕ್ಷೆಯು ಅಂತಿಮವಾಗಿ ಕೊನೆಗೊಂಡಿತು ಎಂದು ಮೂಲಗಳು ತಿಳಿಸಿವೆ. ಶ್ರದ್ಧಾಳನ್ನು ಕೊಂದು ಆಕೆಯ ದೇಹದ ಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಆತ ಹಲವಾರು ಹುಡುಗಿಯರೊಂದಿಗೆ ಸಂಬAಧ ಹೊಂದಿದ್ದನು ಎಂದು ತಿಳಿದು ಬಂದಿದೆ. ಇತ್ತೀಚೆಗೆ, ದೆಹಲಿ ಪೊಲೀಸರು ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್‌ನನ್ನು ಭೇಟಿಯಾಗಿದ್ದ ಇತರ ಯುವತಿಯನ್ನು ಸಂಪರ್ಕಿಸಿದ್ದರು. ವೃತ್ತಿಯಲ್ಲಿ ಮನಶಾಸ್ತçಜ್ಞೆಯಾಗಿದ್ದ ಮಹಿಳೆಗೆ ಅಫ್ತಾಬ್ ನೀಡಿದ್ದ ಶ್ರದ್ಧಾಳ ಉಂಗುರವನ್ನು ಪೊಲೀಸರು ವಶಪಡಿಸಿ ಕೊಂಡಿದ್ದರು. ಆಫ್ತಾಬ್, ಶ್ರದ್ಧಾಳನ್ನು ಮೊದಲು ಭೇಟಿಯಾಗಿದ್ದ ಅದೇ ಮೊಬೈಲ್ ಡೇಟಿಂಗ್ ಅಪ್ಲಿಕೇಶನ್ ಬಂಬಲ್‌ನಲ್ಲಿ ಮತ್ತೋರ್ವ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಪೊಲೀಸರಿಗೆ ಮಹಿಳೆ ನೀಡಿರುವ ಹೇಳಿಕೆಯಲ್ಲಿ, ಅಫ್ತಾಬ್‌ನನ್ನು ಶ್ರದ್ಧಾರೊಂದಿಗೆ ಇದ್ದ ಆತನ ಚತ್ತರ್‌ಪುರದ ನಿವಾಸದಲ್ಲಿ ಎರಡು ಬಾರಿ ಭೇಟಿಯಾಗಿದ್ದೆ. ಆದರೆ, ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿರುವ ಸಂತ್ರಸ್ತೆಯ ದೇಹದ ಭಾಗಗಳ ಬಗ್ಗೆ ನನಗೆ ಯಾವುದೇ ಸುಳಿವು ಇರಲಿಲ್ಲ ಎಂದಿದ್ದಾರೆ. ಮೂಲಗಳ ಪ್ರಕಾರ, ಮೇ ೧೮ ರಂದು ಶ್ರದ್ಧಾಳನ್ನು ಕೊಂದ ೧೨ ದಿನಗಳ ನಂತರ, ಮೇ ೩೦ ರಂದು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಮಹಿಳೆಯು ಅಫ್ತಾಬ್‌ನಿಗೆ ಪರಿಚಯವಾಗಿದ್ದಾಳೆ. ಈ ಪ್ರಕರಣದಲ್ಲಿ ಸುಳ್ಳು ಪತ್ತೆ ಪರೀಕ್ಷೆ ಮತ್ತು ನಾರ್ಕೋ ಪರೀಕ್ಷೆ ಅತ್ಯಗತ್ಯ ಎಂದು ಮೂಲಗಳು ತಿಳಿಸಿದ್ದು, ವಿಚಾರಣೆ ವೇಳೆ ಅಫ್ತಾಬ್ ವಂಚಕ ಸ್ವಭಾವದವನಾಗಿದ್ದ ಮತ್ತು ವಿಚಾರಣೆ ನಡೆಸಿದವರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿಸಿವೆ.

ತಾಲಿಬಾನ್ ನಿಂದ ಆತ್ಮಾಹುತಿ ಬಾಂಬ್ ದಾಳಿ: ಮೂವರು ಸಾವು

ಕ್ವೆಟ್ಟಾ, ನ. ೩೦: ಪಶ್ಚಿಮ ಪಾಕಿಸ್ತಾನದಲ್ಲಿ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ಬುಧವಾರ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ೨೩ ಮಂದಿ ಗಾಯಗೊಂಡಿದ್ದಾರೆ. ತಾಲಿಬಾನ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಬಲೂಚಿಸ್ತಾನ ಬಳಿಯ ಕ್ವೆಟ್ಟಾದ ಬಲೇಲಿ ಪ್ರದೇಶದಲ್ಲಿ ಪೊಲೀಸ್ ಟ್ರಕ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಓರ್ವ ಪೊಲೀಸ್, ಮಹಿಳೆ ಮತ್ತು ಮಗು ಮೃತಪಟ್ಟಿದ್ದು, ೨೦ ಪೊಲೀಸ್ ಅಧಿಕಾರಿಗಳು ಸೇರಿದಂತೆ ೨೩ ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹÀತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜರ್ ಮೆಹೆಸರ್ ಅವರು ತಿಳಿಸಿದ್ದಾರೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯ ಹೊಣೆ ಹೊತ್ತುಕೊಂಡಿದ್ದು, ಒಂದು ದಿನದ ಹಿಂದೆಯಷ್ಟೇ ಉಗ್ರಗಾಮಿ ಗುಂಪು ಸರ್ಕಾರದೊಂದಿಗೆ ತನ್ನ ಕದನ ವಿರಾಮವನ್ನು ಹಿಂತೆಗೆದುಕೊAಡಿತ್ತು. ಬಳಿಕ ದೇಶಾದ್ಯಂತ ದಾಳಿಗಳನ್ನು ನಡೆಸುವಂತೆ ತನ್ನ ಸೈನಿಕರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಕದನ ವಿರಾಮದ ಸಮಯದಲ್ಲಿ ಸಂಸ್ಥಾಪಕ ಸದಸ್ಯ ಉಮರ್ ಖಾಲಿದ್ ಖುರಾಸಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಕಸ್ಟಮ್ಸ್ ಪೋಸ್ಟ್ ಬಳಿ ತಮ್ಮ ಪವಿತ್ರ ಯೋಧ ಕಾರ್ ಬಾಂಬ್ ಸ್ಫೋಟಿಸಿರುವುದಾಗಿ ಎಂದು ಟಿಟಿಪಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ತಮ್ಮ ಸೇಡಿನ ಕಾರ್ಯಾಚರಣೆಗಳು ಮುಂದುವರೆಯುತ್ತವೆ ಎಂದು ಹೇಳಿದೆ.

ಮಧ್ಯಪ್ರದೇಶದಲ್ಲಿ ಭೀಕರ ಎನ್‌ಕೌಂಟರ್: ಇಬ್ಬರು ನಕ್ಸಲರ ಸಾವು

ಮಧ್ಯಪ್ರದೇಶ, ನ. ೩೦: ಮಧ್ಯಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಭೀಕರ ಎನ್‌ಕೌಂಟರ್ ಆರಂಭವಾಗಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶದ ಮಂಡ್ಲಾ ಮತ್ತು ಬಾಲಾಘಾಟ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಬುಧವಾರ ಹಾಕ್‌ಫೋರ್ಸ್ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಮಂಡ್ಲಾ ಮತ್ತು ಬಾಲಾಘಾಟ್ ಜಿಲ್ಲೆಯ ಜಂಟಿ ಹಾಕ್ ಫೋರ್ಸ್ ತಂಡವು ಬುಧವಾರ ಬೆಳಿಗ್ಗೆ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಬಾಲಘಾಟ್ ಜಿಲ್ಲೆಯ ಗರ್ಹಿ ಪ್ರದೇಶ ಮತ್ತು ಮಂಡ್ಲಾ ಜಿಲ್ಲೆಯ ಮೋತಿನಾಳದ ಸುಪ್ಖಾರ್ ಪ್ರದೇಶದ ನಡುವೆ ಎನ್‌ಕೌಂಟರ್ ಸಂಭವಿಸಿದೆ ಎಂದು ಮಂಡ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ), ಗಜೇಂದ್ರ ಸಿಂಗ್ ತಿಳಿಸಿದರು. ಇಬ್ಬರು ನಕ್ಸಲರನ್ನು ಇಲ್ಲಿಯವರೆಗೆ ಗುಂಡಿಕ್ಕಿ ಕೊಂದಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಎಎಸ್ಪಿ ಸಿಂಗ್ ಹೇಳಿದರು, ಮೃತ ನಕ್ಸಲರು ಕನ್ಹಾ ಭೋರಮ್‌ದೇವ್ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಅವರ ಚಲನವಲನದ ಬಗ್ಗೆ ಹಾಕ್‌ಫೋರ್ಸ್ ತಂಡವು ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತಿದೆ ಎಂದು ಹೇಳಿದರು.