ಪೊನ್ನಂಪೇಟೆ, ನ. ೨೯: ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳ ಕುರಿತು ವ್ಯಾಪಕ ಬೋಧನೆಯಾಗಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಜನರಿಗೆ ಧಾರ್ಮಿಕವಾಗಿರುವ ಕೆಲವು ಕೆಟ್ಟ ನಂಬಿಕೆಗಳು ದೂರವಾದರೆ ಮಾತ್ರ ಅವರು ಮಾನವ ಸಹೋದರತೆಯ ಕುರಿತು ಚಿಂತಿಸಲು ಸಾಧ್ಯ ಎಂದು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ಧಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಸಂರಕ್ಷಣಾ ಸಮಿತಿ ವತಿಯಿಂದ ವೀರಾಜಪೇಟೆ ಸಮೀಪದ ನಲ್ವತ್ತೋಕ್ಲಿನಲ್ಲಿ ನಡೆದ ಕಂದೂರಿ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾದಿಯವರ ತತ್ವ ಬೋಧನೆಯಿಂದ ಪರಿಣಾಮ ಬೀರಿದರೆ ಅದು ಸಮಾಜದಲ್ಲಿ ಮತ್ತಷ್ಟು ಭಾವೈಕ್ಯತೆ ಮತ್ತು ಸಾಮರಸ್ಯ ಮೂಡಿಸಲು ನೆರವಾಗುತ್ತದೆ. ಶಾಂತಿ ಮತ್ತು ಸಹೋದರತೆಯ ತಳಹದಿಯಾಗಿರುವ ಎಲ್ಲ ಧರ್ಮಗಳ ಪ್ರಮುಖ ಆಶಯಗಳನ್ನು ಪರಸ್ಪರ ಅರ್ಥೈಸಿಕೊಂಡರೆ ಮಾತ್ರ ಮನುಷ್ಯ ಸ್ನೇಹದ ನಿಜರೂಪ ತಿಳಿಯಲು ಸಾಧ್ಯ. ಈ ಕುರಿತ ಜಾಗೃತಿ ಜನರಲ್ಲಿ ಮೂಡಿದರೆ ವಿಶ್ವಶಾಂತಿಯ ಕನಸು ನನಸಾಗುತ್ತದೆ ಎಂದು ಅವರು ಹೇಳಿದರು. ಪ್ರತಿ ವರ್ಷ ಅದ್ದೂರಿ ಯಿಂದ ಆಚರಿಸಲ್ಪಡುವ ಕಂದೂರಿ ನಲ್ವತೋಕ್ಲು ಗ್ರಾಮಕ್ಕೆ ವಿಶೇಷ ಮೆರಗನ್ನು ನೀಡುವುದರ ಜೊತೆಗೆ ಕಂದೂರಿ ಆಚರಣೆ ನಲ್ವತ್ತೋಕ್ಲು ಗ್ರಾಮಕ್ಕೆ ವಿಶೇಷ ಹೆಸರನ್ನು ತಂದು ಕೊಟ್ಟಿದೆ. ಪ್ರವಾದಿಯವರ ಜನ್ಮ ದಿನಾಚರಣೆಯ ಅಂಗವಾಗಿ ಜರುಗುವ ಈ ಕಂದೂರಿ ಆಚರಣೆ ಇಡೀ ಕೊಡಗು ಜಿಲ್ಲೆಯಲ್ಲಿ ನಲ್ವತ್ತೋಕ್ಲು ಗ್ರಾಮವನ್ನು ಹೊರತು ಪಡಿಸಿ ಬೇರೆ ಎಲ್ಲೂ ನಡೆಯುವುದಿಲ್ಲ ಎಂಬುದು ಕೂಡ ಇದರ ಮತ್ತೊಂದು ವಿಶೇಷತೆಯಾಗಿದೆ ಎಂದು ತಿಳಿಸಿದ ನಲ್ವತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಸೂಫಿ ಹಾಜಿ, ಕೊಡಗಿನ ವಿವಿಧ ಗ್ರಾಮಗಳಲ್ಲಿನ ಜನತೆಯ ಪರಸ್ಪರ ಸಹೋದರತೆಗೆ ಈ ಕಂದೂರಿ ಹಲವು ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿಯ ವಕೀಲರಾದ ಕುಂಞಅಬ್ದುಲ್ಲ, ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಕೆ.ಎ. ಆಲಿ, ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಧರ್ಮಗುರುಗಳಾದ ಸಿದ್ದೀಕ್ ಫಾಝಿಳಿ, ಝಿಯಾದ್ ದಾರಿಮಿ, ರಫೀಕ್ ಜಹುರಿ, ಸಿರಾಜ್ ಜಹುರಿ, ಶಿಯಾಬ್, ಹಿರಿಯ ಕಾಂಗ್ರೆಸ್ ಮುಖಂಡರಾದ ಚಿಲ್ಲವಂಡ ಕಾವೇರಪ್ಪ, ಬಿಳಗುಂದ ಗ್ರಾ.ಪಂ. ಮಾಜಿ ಅಧ್ಯಕ್ಷ ಮುಕ್ಕಾಟಿರ ಸಂತೋಷ್, ಸ್ಥಳೀಯ ಗ್ರಾ. ಪಂ. ಸದಸ್ಯರಾದ ಪಿ.ಎ. ಹನೀಫ್, ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಡಿ.ಎಫ್. ಅಶ್ರಫ್, ಗ್ರಾಮದ ಮಾಜಿ ಯೋಧರಾದ ದುದ್ದಿಯಂಡ ಮಹಮ್ಮದ್ (ಮಮ್ಮಿ), ಪೊಲೀಸ್ ಇಲಾಖೆಯ ಇಸ್ಮಾಯಿಲ್, ಗ್ರಾಮದ ಪ್ರಮುಖರಾದ ಕೆ.ಎ. ಜುಬೈರ್, ಹಸನ್ ಹಾಜಿ, ಅಹಮದ್, ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ. ರಫೀಕ್, ಪಿ.ಎ. ಮಜೀದ್, ಪಿ.ಎ. ಸಿರಾಜ್ ಸೇರಿದಂತೆ ಗ್ರಾಮಸ್ಥರು, ಪಾಲ್ಗೊಂಡಿದ್ದರು.