ಪೊನ್ನಂಪೇಟೆ, ನ.೨೭ : ಪೊನ್ನಂಪೇಟೆ ನಿವಾಸಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕರಾಗಿದ್ದ ಪುತ್ತಾಮನೆ ಗಣೇಶ್ ಮುದ್ದಮಯ್ಯ (೮೫) ಅವರು ತಾ.೨೭ ರಂದು ಮೈಸೂರಿನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.

ವಿವಿಧ ಸಾರ್ವಜನಿಕ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪುತ್ತಾಮನೆ ಗಣೇಶ್ ಅವರು ಹಿರಿಯ ದಾನಿ ಹಾಗೂ ಸಮಾಜ ಸೇವಕರಾಗಿದ್ದರು. ಇವರು ಪೊನ್ನಂಪೇಟೆ ವಿ ಎಸ್ ಎಸ್ ಎನ್ ಬ್ಯಾಂಕ್ ನ ಅಧ್ಯಕ್ಷರಾಗಿ, ಕೊಡವ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕೂರ್ಗ್ ಆರೆಂಜ್ ಸೊಸೈಟಿ ನಿರ್ದೇಶಕರಾಗಿ, ಕೊಡಗಿನಲ್ಲಿ ತಾಳೆ ಬೆಳೆಗಾರಿಕೆ ಪ್ರಾರಂಭವಾದ ದಿನಗಳಲ್ಲಿ ಫಾಮ್ ಟೆಕ್ ಇಂಡಿಯಾದ ಕೊಡಗು ಜಿಲ್ಲಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅಖಿಲ ಅಮ್ಮಕೊಡವ ಸಮಾಜದಲ್ಲಿ ಸಕ್ರಿಯರಾಗಿದ್ದರು.

ಮೃತರ ಇಬ್ಬರು ಪುತ್ರರು ಕೆನಡದಲ್ಲಿ ವಾಸವಾಗಿದ್ದು, ಅವರು ಮಂಗಳವಾರ ಪೊನ್ನಂಪೇಟೆಗೆ ತಲುಪಲಿದ್ದು, ಮೃತರ ಅಂತ್ಯಕ್ರಿಯೆಯನ್ನು ಮಂಗಳವಾರ ಪೊನ್ನಂಪೇಟೆ ಸಮೀಪ ಮತ್ತೂರಿನಲ್ಲಿರುವ ಮೃತರ ತೋಟದಲ್ಲಿ ನೆರವೇರಿಸಲಾಗುವುದು. ಅಲ್ಲಿಯವರೆಗೂ ಮೃತದೇಹವನ್ನು ಪೊನ್ನಂಪೇಟೆಯ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾನಂಡ ಎನ್. ಪ್ರಥ್ಯು ಅವರು ಗಣೇಶ್ ಮುದ್ದಮಯ್ಯ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.