(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ನ. ೨೮: ಲೋಕೋಪಯೋಗಿ ಗುತ್ತಿಗೆದಾರನ ಅಪೂರ್ಣ ಕಾಮಗಾರಿಯಿಂದಾಗಿ ಸಾರ್ವಜನಿಕರು ದಿನಂಪ್ರತಿ ತಮ್ಮ ವಾಹನಗಳಲ್ಲಿ ಓಡಾಡುತ್ತಿರುವ ರಸ್ತೆಗೆ ಇದೀಗ ಕಂಟಕ ಎದುರಾಗಿದೆ. ಪೊನ್ನಂಪೇಟೆ-ಕಾನೂರು-ನಿಟ್ಟೂರು ಸಂಪರ್ಕಿಸುವ ೫.೧ ಕಿ.ಮೀ. ರಸ್ತೆಯನ್ನು ಅಗಲೀಕರಣ ಹಾಗೂ ಡಾಂಬರೀಕರಣಗೊಳಿಸಲು ೨೦೧೯-೨೦ನೇ ಸಾಲಿನಲ್ಲಿ ವೀರಾಜಪೇಟೆ ಲೋಕೋಪಯೋಗಿ ಇಲಾಖೆಯು ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ ಲೋಕೋಪಯೋಗಿ ಇಲಾಖೆಯ ಒಂದನೆ ದರ್ಜೆ ಗುತ್ತಿಗೆದಾರರಾದ ವೇಣುಗೋಪಾಲ್ ಭಾಗವಹಿಸಿ ರಸ್ತೆ ಕಾಮಗಾರಿ ಗುತ್ತಿಗೆಯನ್ನು ಇಲಾಖೆ ವತಿಯಿಂದ ಪಡೆದುಕೊಂಡಿದ್ದರು.
ಇಲಾಖೆ ನಿಯಮದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಗುತ್ತಿಗೆದಾರರು ೬ ತಿಂಗಳೊಳಗಾಗಿ ಒಳಗೆ ಪೂರೈಸಬೇಕಾಗಿತ್ತು. ದಿನಾಂಕ ೧೮.೪.೨೦೨೧ರಂದು ಟೆಂಡರ್ ಅವಧಿಯು ಮುಗಿದಿತ್ತು. ಗುತ್ತಿಗೆದಾರರು ೫.೧ಕಿ.ಮೀ. ದೂರದ ರಸ್ತೆಯಲ್ಲಿ ಕೇವಲ ೨ ಮೋರಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ಅರ್ಧದಲ್ಲಿಯೇ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಈ ಭಾಗದಲ್ಲಿ ರಸ್ತೆ ಸಂಚಾರಕ್ಕೆ ವಾಹನಗಳಿಗೆ ಪ್ರತಿನಿತ್ಯ ಸಮಸ್ಯೆ ಎದುರಾಗಿತ್ತು. ಗುಂಡಿ ಬಿದ್ದ ರಸ್ತೆಯಿಂದಾಗಿ ಹಲವು ಅಪಘಾತಗಳು ಈ ಭಾಗದಲ್ಲಿ ನಡೆದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕೋಪಯೋಗಿ ಇಲಾಖೆಯ ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸುವAತೆ ದೂರವಾಣಿ ಮುಖೇನ ಹಾಗೂ ಲಿಖಿತ ಮೂಲಕವಾಗಿ ಪತ್ರ ಬರೆದು ಗಮನ ಸೆಳೆದಿದ್ದರು.
ಗುತ್ತಿಗೆದಾರರು ಇಲಾಖೆ ನೀಡಿದ ನೋಟೀಸಿಗೆ ಸರಿಯಾಗಿ ಸ್ಪಂದಿಸದೆ ಇರುವ ನಿಟ್ಟಿನಲ್ಲಿ ಟೆಂಡರ್ ಕಾಲಾವಧಿಯು ಮುಕ್ತಾಯವಾದ್ದರಿಂದ ಕೊಡಗು ಜಿಲ್ಲೆಯ ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಈ ಬಗ್ಗೆ ಪತ್ರ ಬರೆದು ಇಲ್ಲಿಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸಿ ಗುತ್ತಿಗೆದಾರನ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ವೀರಾಜಪೇಟೆ ಇಂಜಿನಿಯರ್ ಶಿಫಾರಸ್ಸು ಪತ್ರ ನೀಡಿದ್ದರು. ಪತ್ರದ ಹಿನ್ನೆಲೆಯಲ್ಲಿ ಗುತ್ತಿಗೆದಾರನ ವಿಳಂಬ ನೀತಿಯಿಂದಾಗಿ ಟೆಂಡರ್ ನಿಯಮಾವಳಿಯಂತೆ ಕರಾರು ರದ್ದತಿಗೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಬೆಂಗಳೂರು ಮಟ್ಟದ ಕಚೇರಿಯಲ್ಲಿ ಈ ಬಗ್ಗೆ ಯಾವುದೇ ಪ್ರಕ್ರಿಯೆಗಳು ನಡೆಯದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದತಿಯಲ್ಲಿ ಯಾವುದೇ ಕ್ರಮ ಜರುಗಿಲ್ಲ. ಇದರಿಂದಾಗಿ ವರ್ಷ ಕಳೆಯುತ್ತಿದ್ದಂತೆಯೇ ಈ ರಸ್ತೆಯು ದೊಡ್ಡ ದೊಡ್ಡ ಗುಂಡಿಗಳಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಯಿತು.
ಗುತ್ತಿಗೆದಾರ ತನಗೆ ವಹಿಸಿದ ಕೆಲಸವನ್ನು ನಿಗದಿತ ಅವಧಿಯಲ್ಲಿ ಪೂರೈಸದೆ, ಇತ್ತ ಟೆಂಡರ್ ರದ್ದತಿಗೆ ಅವಕಾಶವನ್ನು ನೀಡದೆ ಇರುವ ಹಿನ್ನೆಲೆಯಲ್ಲಿ ಇದೀಗ ಈ ಭಾಗದಲ್ಲಿ ನಿರಂತರವಾಗಿ ಸಂಚರಿಸುತ್ತಿರುವ ವಾಹನಗಳಿಗೆ ಸಮಸ್ಯೆ ಎದುರಾಗಿದೆ.