ಸೋಮವಾರಪೇಟೆ, ನ. ೨೮ : ಸಂವಿಧಾನ ಸಮರ್ಪಣಾ ದಿನವನ್ನು ಕೇಂದ್ರ ಸರ್ಕಾರ ಚಾರ್ತುವರ್ಣ ಮತ್ತು ತಾರತಮ್ಯದ ಜಾತಿ ಪದ್ದತಿ ವೈಭವೀಕರಣ ದಿನವನ್ನಾಗಿ ಬದಲಾಯಿಸಲು ಹೊರಟಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ, ಈ ಬಗ್ಗೆ ಜಿಲ್ಲಾದ್ಯಂತ ಹೋರಾಟ ಸಂಘಟಿಸ ಲಾಗುವುದು ಎಂದು ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಜೆ.ಆರ್. ಪಾಲಾಕ್ಷ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ನವೆಂಬರ್ ೨೬ರಂದು ದೇಶಕ್ಕೆ ಸಮರ್ಪಿಸ ಲಾಗಿತ್ತು. ಈ ದಿನವನ್ನು ಸಂವಿಧಾನ ದಿನವೆಂದು ಆಚರಿಸಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾತಿ ಪದ್ಧತಿಯ ವೈಭವೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಸಂವಿಧಾನ ದಿನಾಚರಣೆ ಸಂದರ್ಭ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಹ ಸ್ವಾತಂತ್ರö್ಯ, ಸಮಾನತೆ, ಬಂಧುತ್ವ, ಸಾಮಾಜಿಕ ನ್ಯಾಯಗಳಿಗೆ ವಿರುದ್ಧವಾಗಿ ಧೋರಣೆ ಹೊಂದಿರುವ ವೇದಗಳಲ್ಲಿಯೇ ಪ್ರಜಾಪ್ರಭುತ್ವವಿತ್ತು ಎಂಬ ಸುಳ್ಳು ಹೇಳಲು ಹೊರಟಿದೆ. ಇದು ಖಂಡನೀಯ. ಇದರೊಂದಿಗೆ ಕೇಂದ್ರ ಸರ್ಕಾರವು ನವೆಂಬರ್ ೨೬ನ್ನು ಭಾರತ ಪ್ರಜಾತಂತ್ರದ ಜನನಿ ಎಂಬ ಹೆಸರಿನಲ್ಲಿ ದೇಶಾದ್ಯಂತ ರಾಜ್ಯ ಸರ್ಕಾರ, ವಿಶ್ವ ವಿದ್ಯಾಲಯ, ಕೇಂದ್ರ ಕಚೇರಿಗಳಲ್ಲಿ ಆಚರಿಸ ಬೇಕೆಂದು ಸೂಚನೆ ನೀಡಿದೆ. ಆದರೆ ಎಲ್ಲೂ ಸಹ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನೆನಪಿಸಿ ಕೊಂಡಿಲ್ಲ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಜೆ.ಎಲ್. ಜನಾರ್ಧನ್, ಕಾರ್ಯದರ್ಶಿ ಎಂ.ಎಸ್. ವೀರೇಂದ್ರ, ಸಹ ಕಾರ್ಯದರ್ಶಿ ವಿ. ಸಂದೀಪ್, ಸದಸ್ಯರಾದ ಡಿ.ಕೆ. ವೀರಭದ್ರ, ಕೆ.ಎನ್. ಇಂದ್ರೇಶ್, ಎಂ.ಪಿ. ಹೊನ್ನಪ್ಪ ಅವರುಗಳು ಉಪಸ್ಥಿತರಿದ್ದರು.