ಮಡಿಕೇರಿ, ನ. ೨೬: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಾಟದಲ್ಲಿ ಗೆಲುವು ಸಾಧಿಸುವ ಮೂಲಕ ಎಂ. ಬಾಡಗ (ಎ) ಹಾಗೂ ಕಿರುಂದಾಡು ತಂಡಗಳು ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡವು. ತಾ. ೨೭ ರಂದು (ಇಂದು) ಮಧ್ಯಾಹ್ನ ೧ ಗಂಟೆಗೆ ಅಂತಿಮ ಪಂದ್ಯಾವಳಿ ನಡೆಯಲಿದೆ.
ಮೊದಲ ಸೆಮಿಫೈನಲ್ ಪಂದ್ಯಾಟ ಎಂ. ಬಾಡಗ (ಎ) ಹಾಗೂ ಚೆಂಬೆಬೆಳ್ಳೂರು ನಡುವೆ ನಡೆದು ೪-೨ ಗೋಲುಗಳ ಅಂತರದಲ್ಲಿ ಎಂ. ಬಾಡಗ ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶಿಸಿತು. ಬಾಡಗ ಪರ ರಮೇಶ್ ಹಾಗೂ ದೇಚಮ್ಮ ತಲಾ ೨ ಗೋಲು ಬಾರಿಸಿದರು. ಚೆಂಬೆಬೆಳ್ಳೂರು ಪರ ಮೋಕ್ಷಿತ್, ಅಪ್ಪಯ್ಯ ತಲಾ ಒಂದೊAದು ಗೋಲು ಹೊಡೆದರು.
೨ನೇ ಸೆಮಿಫೈನಲ್ ಪಂದ್ಯಾಟ ಅತ್ಯಂತ ರೋಚಕತೆಯಲ್ಲಿ ಕೂಡಿತ್ತು. ಕಿರುಂದಾಡು ಹಾಗೂ ನಾಪೋಕ್ಲು ೧-೧ ಗೋಲುಗಳ ಸಮಬಲ ಸಾಧಿಸಿದ್ದ ಹಿನ್ನೆಲೆ ಸಡನ್ ಡೆತ್ ಮೊರೆಹೋಗಲಾಯಿತು. ಇದರಲ್ಲಿ ಕಿರುಂದಾಡು ಪರ ಕವನ್, ಶಂಕು, ಕಾಳಪ್ಪ ತಲಾ ೨ ಗೋಲು ಗಳಿಸಿದರೆ, ನಾಪೋಕ್ಲು ಪರ ನಾಚಪ್ಪ, ಉತ್ತಯ್ಯ ತಲಾ ೨, ಚಿಟ್ಟಿಯ್ಯಪ್ಪ ಒಂದು ಗೋಲು ಹೊಡೆದರು.
ಸಭಾ ಕಾರ್ಯಕ್ರಮ
ಸೆಮಿಫೈನಲ್ ಪಂದ್ಯಾಟಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಕ್ರೀಡೆ ಸಂಸ್ಕೃತಿಯ ಒಂದು ಭಾಗವಾಗಿದೆ. ಜಿಲ್ಲೆಯಲ್ಲಿ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯಬೇಕು. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿಯಾಗುತ್ತದೆ. ಜೊತೆಗೆ ನಿತ್ಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದರು.
ಮೂರ್ನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಸಂಘಟನೆ ಪಂದ್ಯಾವಳಿ ಆಯೋಜಿಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
೨ನೇ ಸೆಮಿಫೈನಲ್ ಪಂದ್ಯಾಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಕ್ರೀಡೆ ಜೀವನಶೈಲಿಯ ಒಂದು ಭಾಗವಾಗಿ ಮಾಡಿಕೊಳ್ಳಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಕೊಡಗಿನ ಕ್ರೀಡಾಪಟುಗಳ ಮತ್ತಷ್ಟು ಸಾಧನೆ ಮಾಡಲು ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಈ ಹಿನ್ನೆಲೆ ಈ ರೀತಿಯ ಕ್ರೀಡಾಕೂಟ ಗಳಿಂದ ಅಭ್ಯಾಸದ ಜೊತೆಗೆ ವೇದಿಕೆಯೂ ದೊರೆತಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರ್ನಾಡು ವ್ಯವಸಾಯ ಉತ್ಪನ್ನ ಮಾರಾಟ ಸಂಘದ ಅಧ್ಯಕ್ಷ ಪೆಬ್ಬಾಟಂಡ ಪೆಮ್ಮಯ್ಯ ಮಾತನಾಡಿದರು.
ನಿರ್ದೇಶಕ ಅಪ್ಪಚಂಡ ರಮೇಶ್ ದೇವಯ್ಯ ಸ್ವಾಗತಿಸಿ, ಬಾರಿಯಂಡ ಚರಿಷ್ಮ ಸುಬ್ರಮಣಿ ನಿರೂಪಿಸಿ, ಮಡೆಯಂಡ ಪ್ರೀನಾ ಚರ್ಮಣ್ಣ ವಂದಿಸಿದರು.