ಮಡಿಕೇರಿ, ನ. ೨೬: ನಗರದ ಪುರಾತನ ಶ್ರೀ ಮುತ್ತಪ್ಪ ದೇವಾಲಯದಲ್ಲಿ ತಾ. ೨೯ ರಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆಯಿಂದ ವಿಶೇಷ ಪಂಚಾಮೃತ ಅಭಿಷೇಕ ಸೇವೆ, ಕ್ಷೀರಾಭಿಷೇಕ, ಅಪ್ಪಂ, ಪಂಚಕಜ್ಜಾಯ ಸೇವೆ, ಹಣ್ಣು ಕಾಯಿ ಪೂಜೆ, ಪುಷ್ಪಾರ್ಚನೆ ಸೇರಿದಂತೆ ಮೊದಲ ಬಾರಿಗೆ ರಂಗ ಪೂಜೆ ನೆರವೇರಲಿದೆ. ಮಧ್ಯಾಹ್ನ ೧೨ ಗಂಟೆಗೆ ಸುಬ್ರಹ್ಮಣ್ಯ ದೇವರ ಶ್ರೀಭೂತ ಬಲಿ, ೧೨.೩೦ ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಎಸ್. ಸುರೇಶ್ ಮುತ್ತಪ್ಪ, ಉಪಾಧ್ಯಕ್ಷ ಮನೋರಂಜನ್, ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಮಿತಿ ಅಧ್ಯಕ್ಷ ಪಿ. ವಿನೋದ್, ಖಜಾಂಚಿ ಸದಾಶಿವ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ದೀಪಾ ಉಪಸ್ಥಿತರಿದ್ದರು.