ಸೋಮವಾರಪೇಟೆ, ನ. ೨೬: ಶಾಸಕರುಗಳು ಕಳೆದ ನಾಲ್ಕು ವರ್ಷಗಳಿಂದಲೂ ಕಾಮಗಾರಿಗೆ ಭೂಮಿಪೂಜೆ ಮಾಡುತ್ತಿದ್ದಾರೆ. ಆದರೆ ಭೂಮಿಪೂಜೆ ನೆರವೇರಿದ ಶೇ. ೯೦ ರಷ್ಟು ಕಾಮಗಾರಿಗಳು ಇಂದಿಗೂ ಪ್ರಾರಂಭವಾಗಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದಕ್ಕೆ ಬಿಜೆಪಿ ಶಾಸಕರುಗಳೇ ಕಾರಣರಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಪ್ರಚಾರಕ್ಕಾಗಿ ಮಾತ್ರ ಭೂಮಿಪೂಜೆ ಮಾಡುತ್ತಿದ್ದಾರೆ. ಆದರೆ ಕಾಮಗಾರಿ ಬಗ್ಗೆ ಗಮನಹರಿಸುತ್ತಿಲ್ಲ. ಶೇ. ೯೦ ರಷ್ಟು ಕಾಮಗಾರಿಗಳು ಪ್ರಾರಂಭವಾಗಿಲ್ಲ ಎಂದು ದೂರಿದರು.
ಕಾವೇರಿ ನೀರಾವರಿ ನಿಗಮ, ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಸಿಕ್ಕಿದ ಅನುದಾನದ ಕಾಮಗಾರಿಗಳು ನಡೆದಿವೆ. ಮಳೆಹಾನಿಯಲ್ಲಿ ೧೦೦ ಮೀಟರ್, ೨೦೦ ಮೀ ರಸ್ತೆ ಹೊರತುಪಡಿಸಿ, ಉಳಿದ ಕಾಮಗಾರಿಗಳು ನಡೆದಿಲ್ಲ. ಬಹುತೇಕ ಗ್ರಾಮೀಣ ರಸ್ತೆಗಳು ಗುಂಡಿಮಯವಾಗಿ ದಶಕಗಳೇ ಕಳೆದಿವೆ.
ಅಕ್ರಮ-ಸಕ್ರಮದಲ್ಲಿ ಹಕ್ಕುಪತ್ರಗಳು ರಾಜಕೀಯ ಪ್ರಭಾವಿಗಳಿಗೆ ಮತ್ತು ಹಣ ಕೊಟ್ಟವರಿಗೆ ವಿತರಣೆಯಾಗುತ್ತಿದೆ ಎಂಬ ರೈತರ ಆರೋಪದ ಬಗ್ಗೆ ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಫಾರಂ ನಂ. ೫೦, ೫೩ ರಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಕಳೆದ ೨೦ ವರ್ಷಗಳಿಂದ ಅನೇಕರು ಕಾಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ವಿತರಣೆ ಆಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಬಡ ರೈತರಿಗೆ ಅನ್ಯಾಯವಾಗುತ್ತಿದೆ.
ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸುವವರಿಗೆ ಸ್ವೀಕೃತಿಯನ್ನು ಕೊಡಬೇಕು. ಅರ್ಜಿಯ ಸಂಪೂರ್ಣ ಮಾಹಿತಿಯನ್ನು ದಾಖಲೆ ಪುಸ್ತಕದಲ್ಲಿ ನಮೂದಿಸಬೇಕು. ವಿಳಂಬಕ್ಕೆ ಕಾರಣವನ್ನು ದಾಖಲಿಸಬೇಕು. ತಹಶೀಲ್ದಾರರು ಇಂತಹ ಕ್ರಮಗಳನ್ನು ಕೈಗೊಳ್ಳದಿದ್ದರೆ ತಾಲ್ಲೂಕು ಕಚೇರಿಯಲ್ಲಿನ ಗೋಲ್‌ಮಾಲ್ ಹತೋಟಿಗೆ ತರಲು ಸಾಧ್ಯವಾಗುವುದಿಲ್ಲ. ಈ ವಿಷಯದ ಬಗ್ಗೆಯೂ ತಹಸೀಲ್ದಾರ್‌ರ ಗಮನಕ್ಕೆ ತರಲಾಗಿದೆ ಎಂದರು.
ಬಡ ರೈತರಿಗೂ ಹಕ್ಕುಪತ್ರ ಸಿಗಬೇಕು. ಈ ಬಗ್ಗೆ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಹೇಳಿದರು. ಗೋಷ್ಠಿಯಲ್ಲಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಚಂಗಪ್ಪ ಇದ್ದರು.